ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಿ ತಾಲೂಕಿನ ಸುಜ್ಜಲೂರು ರೈತರು, ಗ್ರಾಮಸ್ಥರು ಸೆಸ್ಕ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜೂನಿಯರ್ ಇಂ ಜಿನಿಯರ್ ಸಿ. ಗೀತಾ ಅವರನ್ನು ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.ಗ್ರಾಮಸ್ಥರು ಶನಿವಾರ ಬೆಳಗ್ಗೆ ಸೆಸ್ಕ್ ಕಚೇರಿ ಎದುರು ಸೇರಿ ಸಮರ್ಪಕವಾಗಿ ವಿದ್ಯುತ್ ಪೂರೈಸದ ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ರೈತರು ಹರಿಶಿನ, ಕಬ್ಬು, ಮಂಗಳೂರು ಸವತೆ ಬೆಳೆಗಳನ್ನು ಬೆಳೆಯುತ್ತಿದ್ದು, ನಾಲೆಯಲ್ಲಿ ನೀರಿಲ್ಲದ ಕಾರಣ ಪಂಪ್ ಸೆಟ್ ಗಳ ಆಶ್ರಯದಲ್ಲಿ ಬೆಳೆಗಳನ್ನು ಬೆಳೆಯ ಬೇಕಾಗಿದೆ. ಆದರೆ ಸೆಸ್ಕ್ ಅಧಿಕಾರಿಗಳು ದಿನಕ್ಕೆ ಕೇವಲ ಎರಡು ಗಂಟೆ ನೀರು ಬಿಡುತ್ತಿರುವುದರಿಂದ ಬೆಳೆಗಳಿಗೆ ನೀರಿಲ್ಲದಂತಾಗಿ ರೈತ ತೊಂದರೆಗೆ ಒಳಗಾಗುತ್ತಿದ್ದಾನೆ ಎಂದು ಆರೋಪಿಸಿದರು.ಚೆಸ್ಕಾಂ ಆಧಿಕಾರಿಗಳ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕಚೇರಿಯಲ್ಲಿ ಕಾರ್ಯನಿರತರಾಗಿದ್ದ ಜೂನಿಯರ್ ಇಂಜಿನಿಯರ್ ಸಿ. ಗೀತಾ ಅವರನ್ನು ತೀವ್ರವಾಗಿ ತರಾಟೆ ತೆಗೆದುಕೊಂಡರು.
ನಂತರ ಗೀತಾ ಅವರು ಮಾತನಾಡಿ, ಸುಜ್ಜಲೂರು, ವಾಟಾಳು ಗ್ರಾಮಗಳಿಗೆ ಸರಿದೂಗಿಸಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಹಾಗಾಗಿ ಸಮಸ್ಯೆ ಎದುರಾಗಿದೆ. ಮಳೆ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಅಲ್ಲಿಯ ತನಕ ಸರತಿಯ ಮೇರೆಗೆ ವಿದ್ಯುತ್ ಹಂಚಿಕೆ ಮಾಡಲಾಗುತ್ತದೆ ಎಂದು ರೈತರಿಗೆ ಮನವೊಲಿಸಲು ಮುಂದಾದರು.ಆದರೆ ಇದನ್ನು ಒಪ್ಪದ ಗ್ರಾಮಸ್ಥರು, ಮೊದಲೆಲ್ಲ ಮೂಗೂರು ವಿಭಾಗದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು. ಬೆಳಗ್ಗೆ 5 ಹಾಗೂ ರಾತ್ರಿ 2 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಟಿ. ನರಸೀಪುರ ವಿಭಾಗದಿಂದ ವಿದ್ಯುತ್ ಸರಬರಾಜು ಮಾಡುತ್ತಿರುವುದರಿಂದ ತೀವ್ರವಾದ ಸಮಸ್ಯೆ ಎದುರಾಗಿದೆ. ಎರಡು ಗಂಟೆಗಳ ಕಾಲ ಮಾತ್ರವೇ ವಿದ್ಯುತ್ ಸರಬರಾಜಾಗುತ್ತಿದೆ. ಕೆಲವೊಮ್ಮೆ ಮೋಟಾರ್ ಚಾಲನೆ ಮಾಡಲು ಸಾಧ್ಯವಾಗದಷ್ಟು ವಿದ್ಯುತ್ ಸರಬರಾಜಾಗುತ್ತಿಲ್ಲ. ಹಾಗಾಗಿ ನಮಗೆ ಮತ್ತೆ ಮೂಗೂರು ವಿಭಾಗದಿಂದಲೇ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಮಳೆ ಕೊರತೆಯಿಂದ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಮೇಲ್ಮಟ್ಟದಲ್ಲಿ ಚರ್ಚಿಸಲಾಗಿದ್ದು, ವಾಟಾಳು ಗ್ರಾಮದಲ್ಲೇ ವಿದ್ಯುತ್ ವಿಭಾಗ ತೆರೆಯಲು ಚಿಂತನೆ ನಡೆದಿದೆ ಎಂದು ಗೀತಾ ತಿಳಿಸಿದರು.ಗ್ರಾಪಂ ಸದಸ್ಯ ರಘು, ಶಿವಸ್ವಾಮಿ, ರಾಜೇಂದ್ರ, ಗುರು ಬಸವನಾಯಕ, ಬಸವರಾಜು, ಪ್ರದೀಪ್, ಮಹದೇವಪ್ಪ, ಗುರುಸ್ವಾಮಿ, ಮಹೇಶ್ ಭಾಗವಹಿಸಿದ್ದರು.