ಹೊಸ ಬಸ್‌ಗಳಿಗೆ ಶಾಸಕ ಮಾನೆ ಹಸಿರು ನಿಶಾನೆ

| Published : Mar 11 2024, 01:15 AM IST

ಸಾರಾಂಶ

ಇಲ್ಲಿನ ಕೆಎಸ್‌ಆರ್‌ಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ 6 ಹೊಸ ಬಸ್‌ಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿದರು.

ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕನಿಷ್ಠ ಕೆಲ ಮಾರ್ಗಗಳಲ್ಲಿ ಬಸ್ ಓಡಿಸಲು ಪ್ರಯತ್ನ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಇಲ್ಲಿನ ಕೆಎಸ್‌ಆರ್‌ಟಿಸಿ ಕೇಂದ್ರ ಬಸ್ ನಿಲ್ದಾಣದಲ್ಲಿ 6 ಹೊಸ ಬಸ್‌ಗಳಿಗೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿ, ಅಂತಾರಾಜ್ಯ ಪ್ರಯಾಣಕ್ಕೆ ಮುಕ್ತಗೊಳಿಸಿದರು.

ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆ ಕಳೆದ 4-5 ವರ್ಷಗಳಲ್ಲಿ ಒಂದೇ ಒಂದು ಹೊಸ ಬಸ್ ಖರೀದಿಸಿರಲಿಲ್ಲ. ಇದರಿಂದ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಸಾಧ್ಯವಾಗದೇ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಇದೀಗ ರಾಜ್ಯ ಸರ್ಕಾರ ಹೊಸ ಬಸ್‌ಗಳ ಖರೀದಿ ಮಾಡುತ್ತಿದ್ದು, ವಾಯುವ್ಯ ಸಾರಿಗೆ ಸಂಸ್ಥೆಗೆ 375 ಹೊಸ ಬಸ್‌ಗಳು, ನಮ್ಮ ಹಾವೇರಿ ವಿಭಾಗಕ್ಕೆ 28 ಬಸ್‌ಗಳು ಲಭಿಸಿವೆ. ಮೊದಲ ಹಂತದಲ್ಲಿ ಹಾನಗಲ್ ಸಾರಿಗೆ ಘಟಕಕ್ಕೆ 6 ಬಸ್‌ಗಳು ಲಭಿಸಿದ್ದು, ಇನ್ನೂ 10 ಬಸ್ 2ನೇ ಹಂತದಲ್ಲಿ ದೊರೆಯುವ ವಿಶ್ವಾಸವಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಶಾಸಕ ಶ್ರೀನಿವಾಸ ಮಾನೆ, ಹಾನಗಲ್ ಘಟಕದಲ್ಲಿ ಸದ್ಯ 81 ಬಸ್‌ಗಳಿವೆ. ಹೊಸ ಬಸ್‌ಗಳಿಲ್ಲದೇ ಹೊಸ ಮಾರ್ಗಗಳಲ್ಲಿ ಬಸ್ ಓಡಿಸಲು ಸಾಧ್ಯವಾಗಿಲ್ಲ. ಕೆಲ ಬಸ್‌ಗಳು ದುಸ್ಥಿತಿ ತಲುಪಿದ್ದರಿಂದಲೂ ಸಮಸ್ಯೆ ಉಂಟಾಗಿದೆ. 2ನೇ ಹಂತದಲ್ಲಿ ಇನ್ನಷ್ಟು ಹೊಸ ಬಸ್‌ಗಳು ಲಭಿಸಿದ ಬಳಿಕ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಕನಿಷ್ಠ ಕೆಲ ಮಾರ್ಗಗಳಲ್ಲಿ ಬಸ್ ಓಡಿಸಲು ಪ್ರಯತ್ನಿಸುವ ಭರವಸೆ ನೀಡಿದರು.

ಮುಖಂಡ ಸಂತೋಷ ಸುಣಗಾರ, ಘಟಕ ವ್ಯವಸ್ಥಾಪಕ ಎಚ್.ಡಿ. ಜಾವೂರ, ಸಹಾಯಕ ಲೆಕ್ಕಪತ್ರ ಮೇಲ್ವಿಚಾರಕ ನೀಲಕಂಠ ಹೊಸಮನಿ, ಸಾರಿಗೆ ನಿಯಂತ್ರಕರಾದ ಪಿ.ಎಚ್. ದೊಡ್ಡಮನಿ, ಜೆ.ಬಿ. ಕೋಡಬಾಳ, ಸತೀಶ ಮಡಿವಾಳರ, ಸಿಬ್ಬಂದಿಗಳಾದ ಎಚ್.ಎಂ. ದೇವಣ್ಣನವರ, ಕೆ.ಎಫ್. ಬಾರ್ಕಿ, ಕೆ.ಎನ್. ಸುಂಡಿ, ಎಸ್.ಬಿ. ಹಾದಿಮನಿ ಈ ಸಂದರ್ಭದಲ್ಲಿದ್ದರು.