ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿಗೆ ಅ.15ರಿಂದ ವಿಮಾನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಪುನರಾರಂಭಕ್ಕೆ ಮುಂದಾಗಬೇಕು ಹಾಗೂ ಉಡಾನ್ ಯೋಜನೆ ಆರಂಭಿಸಿ ಕಲಬುರಗಿ ವಿಮಾನ ನಿಲ್ದಾಣವನ್ನು ಉಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕಲಬರಗಿ ವಿಮಾನ ನಿಲ್ದಾಣದಿಂದ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ 2019ರಿಂದ ವಿಮಾನ ಸಂಚಾರ ಪ್ರಾರಂಭಗೊಂಡು ಕಳೆದ ಆರು ವರ್ಷಗಳಿಂದ ಕುಂಟುತ್ತ ಸಾಗಿ ಇದೀಗ ಪೂರ್ಣ ಸ್ಥಗಿತಗೊಂಡಿದೆ.
ಉಡಾನ್ ಯೋಜನೆಯಡಿ ಟಿಕೆಟ್ ದರ ಕಡಿಮೆ ಇತ್ತು. ಹೀಗಾಗಿ ಪ್ರಯಾಣಿಕರು ತಕ್ಕಮಟ್ಟಿಗೆ ವಿಮಾನ ಸೇವೆ ಬಳಸುತ್ತಿದ್ದರು. ನಂತರ ಈ ಯೋಜನೆಯಿಂದ ಹೊರಬಂದಾದ ಮೇಲೆ ಹೆಚ್ಚಿನ ದರ ನಿಗದಿಯಾಗಿದ್ದ ಕಾರಣ ಕ್ರಮೇಣ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಕೊನೆಗೆ ನಿಲ್ದಾಣವೇ ವೈಮಾನಿಕ ಸೇವೆ ನಿಲ್ಲಿಸಿಬಿಟ್ಟಿದೆ.ಬಿಕೋ ಎನ್ನುತ್ತಿದೆ ವಿಮಾನ ನಿಲ್ದಾಣ:
ಬೆಂಗಳೂರಿನಿಂದ ಕಲಬುರಗಿಗೆ ನಿತ್ಯ ಸಂಚರಿಸುತ್ತಿದ್ದ ಸ್ಟಾರ್ ಏರ್‌ಲೈನ್ಸ್ ವಿಮಾನ ಸಂಸ್ಥೆಯು ಇದೀಗ ಹೊಸದಾಗಿ ಬೆಂಗಳೂರಿನಿಂದ ಅದೇ ವಿಮಾನವನ್ನು ಅದೇ ವೇಳೆಗೆ ಸೋಲಾಪುರಕ್ಕೆ ಸಂಚಾರ ಪ್ರಾರಂಭಿಸಿರುವುದರಿಂದ ಕಲಬುರಗಿ ವಿಮಾನ ನಿಲ್ದಾಣ ಈಗ ಬಿಕೋ ಎನ್ನುತ್ತಿದೆ.2019 ರಿಂದ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು ಮತ್ತು ತಿರುಪತಿಗೆ ಸಂಚಾರ ಪ್ರಾರಂಭಿಸಿತ್ತು. 2022 ರ ವರೆಗೆ ದೆಹಲಿಯ ಹಿಂಡೋನ್ ಗೆ ವಿಮಾನಸೇವೆ ಲಭ್ಯವಿತ್ತು. ಮೂರು ವರ್ಷಗಳ ಕಾಲ ಉಡಾನ್ ಯೋಜನೆ ಅಡಿ ಸಬ್ಸಿಡಿಯಿಂದ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದ ವಿಮಾನ ಸಂಸ್ಥೆ ಈಗ ಉಡಾನ್ ಯೋಜನೆ ಸ್ಥಗಿತ ಹಾಗೂ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಿದೆ ಎಂಬ ನೆಪ ಹೇಳಿ ಸ್ಟಾರ್ ಏರ್ ಲೈನ್ಸ್ ಸಂಪೂರ್ಣ ಸಂಚಾರ ನಿಲ್ಲಿಸಿದೆ.
ಅಸಮರ್ಪಕ ನಿರ್ವಹಣೆ ಕಾರಣ:ಸ್ಟಾರ್ ಏರ್‌ಲೈನ್ಸ್ ಪ್ರಯಾಣಿಕರಿಗೆ ಸಮಯದ ಅನಾನುಕೂಲತೆ ಸೃಷ್ಟಿ ಮಾಡಿ ನಿಗದಿತ ಸಮಯಕ್ಕೆ ವಿಮಾನ ಹಾರಾಟವನ್ನು ಮಾಡದೆ ಕೊನೆಯ ಕ್ಷಣಕ್ಕೆ ರದ್ದು ಮಾಡಿ ಪ್ರಯಾಣಿಕರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿರುವುದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಹಿಂಜರಿಯುವಂತಾಯಿತು.
ಹೊಸ ನಿಲ್ದಾಣಗಳಿಗೆ ಸಂಪರ್ಕ ಸಾಧ್ಯತೆ:ಕಲಬುರಗಿಯಿಂದ ಬೆಂಗಳೂರು ಒನ್ ಸ್ಟಾಪ್ ಮಾರ್ಗವಾಗಿ ಮಂಗಳೂರು, ಹೊಸದಾಗಿ ನಿರ್ಮಾಣಗೊಂಡ ನವಿ ಮುಂಬಯಿ, ಪೂನಾ, ತಿರುಪತಿ, ದೆಹಲಿ (ಹಿಂಡೋನ್) ಮುಂತಾದಡೆಗಳಿಗೆ ಸಂಚಾರ ಪ್ರಾರಂಭಿಸಲು ಉತ್ತಮ ಅವಕಾಶವಿದೆ. ಈಗಾಗಲೇ ಆಂಧ್ರ,ತೆಲಂಗಾಣದ ಸಣ್ಣಪುಟ್ಟ ನಗರಗಳ ವಿಮಾನ ನಿಲ್ದಾಣದಿಂದ ಮುಂಬಯಿ ಮತ್ತಿತರೆಡೆಗಳಿಗೆ ರಾಜಕೀಯ ಪ್ರತಿನಿಧಿಗಳ ಮುತುವರ್ಜಿಯಿಂದ ಸಂಚಾರ ಆರಂಭಗೊಳ್ಳುತ್ತಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಈ ವಿಮಾನ ನಿಲ್ದಾಣ ಮಾತ್ರ ತೀವ್ರ ಕಡೆಗಣನೆಗೆ ಒಳಗಾಗಿದೆ.
ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಶಂಕುಸ್ಥಾಪನೆ ಮಾಡಿದ ಬಹು ನಿರೀಕ್ಷಿತ ವಿಮಾನ ನಿಲ್ದಾಣ ಕೊನೆಗೂ 2019ರಿಂದ ಸಂಚಾರ ಸೇವೆ ಪ್ರಾರಂಭಿಸಿ ಏಕಾಏಕಿ ಸ್ಥಗಿತಗೊಂಡು ಕಲ್ಯಾಣ ಕರ್ನಾಟಕಕ್ಕೆ ಮಹಾ ಮೋಸವಾಗಿದೆ. ಸಂಘಟನೆಗಳು, ಸಂಸ್ಥಗಳು, ನಾಗರಿಕರು ತಮ್ಮ ಪ್ರಬಲ ಪ್ರತಿಭಟನೆ ವ್ಯಕ್ತಪಡಿಸದೆ ಇರುವುದು ದುರಾದೃಷ್ಟ. ಪಕ್ಷಭೇದ ಮರೆತು ಎಲ್ಲ ಸಂಘ ಸಂಸ್ಥೆಗಳು ನಾಗರಿಕರು ಈ ಭಾಗದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಕಲಬುರಗಿ ವಿಮಾನ ನಿಲ್ದಾಣ ಪುನಶ್ಚೇತನ ಹಾಗೂ ಸಮರ್ಪಕ ನಿರ್ವಹಣೆಗೆ ಒತ್ತಾಯಿಸಬೇಕು.ಡಾ. ಸದಾನಂದ ಪೆರ್ಲ, ಮಾಜಿ ಅಧ್ಯಕ್ಷ, ದಕ ಸಂಘ, ಕಲಬುರಗಿ
ಕೇಂದ್ರ ಸರ್ಕಾರವು ಕೂಡಲೇ ಉಡಾನ್ ಸ್ಕೀಮ್ ಅಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ಸೇರ್ಪಡೆಗೊಳಿಸಿ, ನಿತ್ಯ ವಿಮಾನ ಸಂಚಾರ ಪ್ರಾರಂಭಗೊಳಿಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ.ನರಸಿಂಹ ಮೆಂಡನ್ ಅಧ್ಯಕ್ಷ, ಜಿಲ್ಲಾ ಹೋಟೆಲ್ ಸಂಘ, ಕಲಬುರಗಿ