ಟೊಮೇಟೊ ಮಾರುಕಟ್ಟೆ ಅಭಿವೃದ್ಧಿಗೆ ಅಗತ್ಯವಾದ ೧೦೦ ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಲ್ಲಿ ಸರ್ಕಾರ ಹಾಗೂ ಕಂದಾಯ ಇಲಾಖೆಗೆ ಇಚ್ಛಾಶಕ್ತಿ ಕೊರತೆಯಿದೆ.
ಕೆ.ಸಿ. ವ್ಯಾಲಿ ಮೂರನೇ ಹಂತದ ಶುದ್ಧೀಕರಣ । ಸರ್ಕಾರಿ ಆಸ್ತಿಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸಲು ಆಗ್ರಹ
ಕನ್ನಡಪ್ರಭ ವಾರ್ತೆ ಕೋಲಾರಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ೧೦೦ ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿ, ಕೆ.ಸಿ. ವ್ಯಾಲಿ ಮೂರನೇ ಹಂತದ ಶುದ್ಧೀಕರಣ, ನಕಲಿ ಬಿತ್ತನೆ ಬೀಜ, ಗೊಬ್ಬರ, ಔಷಧಿಗಳ ನಿಯಂತ್ರಣ ಹಾಗೂ ಸರ್ಕಾರಿ ಆಸ್ತಿಗಳ ಒತ್ತುವರಿ ತೆರವಿಗೆ ವಿಶೇಷ ತಂಡ ರಚಿಸಬೇಕೆಂದು ರೈತ ಸಂಘದ ಮುಖಂಡರು ನೂತನ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ನೂತನ ಜಿಲ್ಲಾಧಿಕಾರಿಗೆ ಗಿಡ ನೀಡಿ ಸ್ವಾಗತಿಸಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಕಳೆದ ೨೦ ವರ್ಷಗಳಲ್ಲಿ ಹಲವು ಜಿಲ್ಲಾಧಿಕಾರಿಗಳು, ಸರ್ಕಾರಗಳು ಹಾಗೂ ಜನಪ್ರತಿನಿಧಿಗಳು ಬದಲಾಗಿದ್ದರೂ, ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಟೊಮೇಟೊ ಮಾರುಕಟ್ಟೆ ಅಭಿವೃದ್ಧಿಗೆ ಅಗತ್ಯವಾದ ೧೦೦ ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಲ್ಲಿ ಸರ್ಕಾರ ಹಾಗೂ ಕಂದಾಯ ಇಲಾಖೆಗೆ ಇಚ್ಛಾಶಕ್ತಿ ಕೊರತೆಯಿದೆ ಎಂದು ಆರೋಪಿಸಿದರು.ದೇಶದಲ್ಲೇ ಎರಡನೇ ಅತಿ ದೊಡ್ಡ ಟೊಮೇಟೊ ಮಾರುಕಟ್ಟೆಯಾಗಿ ಗುರುತಿಸಿಕೊಂಡಿರುವ ಕೋಲಾರ ಮಾರುಕಟ್ಟೆಯಿಂದ ದೇಶ-ವಿದೇಶಗಳಿಗೆ ಟೊಮೇಟೊ ರಫ್ತು ಆಗುತ್ತಿದೆ. ಆದರೂ ಜಾಗದ ಕೊರತೆಯಿಂದ ರೈತರು, ವ್ಯಾಪಾರಿಗಳು ಹಾಗೂ ಕಾರ್ಮಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಕಲ್ಲಂಡೂರು ಹಾಗೂ ಆನೇಪುರದ ಗೋಮಾಳದಲ್ಲಿ ಗುರುತಿಸಿರುವ ೧೦೦ ಎಕರೆ ಜಮೀನಿನ ಕಡತ ಸರ್ಕಾರದ ಮಟ್ಟದಲ್ಲಿದ್ದು, ಅದನ್ನು ಶೀಘ್ರ ವಿಲೇವಾರಿ ಮಾಡಲು ವಿಶೇಷ ತಂಡ ರಚಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಕೆ.ಸಿ. ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ಇಲ್ಲದ ಕಾರಣ ಕೆರೆ, ರಾಜಕಾಲುವೆ ಹಾಗೂ ಏಟಿಗಳ ಪಕ್ಕದ ಬೆಳೆಗಳಿಗೆ ಸೊಳ್ಳೆ ಕಾಟ ಮತ್ತು ವಿವಿಧ ರೋಗಗಳ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ಪರವಾನಗಿ ಇಲ್ಲದ ನರ್ಸರಿಗಳೊಂದಿಗೆ ನಕಲಿ ಕಂಪನಿಗಳು ಸೇರಿ ಕಳಪೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ನೂತನ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ನಾನು ಸಹ ಕೃಷಿ ಹಿನ್ನೆಲೆಯ ಜಿಲ್ಲೆಯವನಾಗಿದ್ದು, ರೈತರ ಸಮಸ್ಯೆಗಳನ್ನು ಅರಿತಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆದು ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತ ಸಂಘದ ರಾಜ್ಯ ಮುಖಂಡ ಕಮ್ಮದಟ್ಟಿ ಚಲಪತಿ, ಪಾರುಕ್ ಪಾಷಾ, ನಾಗರಾಜ್, ಜುಬೇರ್ ಪಾಷಾ, ಸುನೀಲ್ ಕುಮಾರ್, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ನಾರಾಯಣಸ್ವಾಮಿ ಗಿರೀಶ್, ಪುತ್ತೇರಿ ರಾಜು, ನಾಗರಾಜ್, ಚಂದ್ರಪ್ಪ, ಚಲಪತಿ, ಮಂಜುನಾಥ್, ತರ್ನಹಳ್ಳಿ ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ಶಂಕರಪ್ಪ, ಗಣೇಶ್ ಇದ್ದರು.