ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವ ಹಿಂದೂಗಳಿಗೆ ಪ್ರತ್ಯೇಕವಾಗಿ ಸುಸಜ್ಜಿತವಾದ ಸ್ಮಶಾನದ ಜಾಗ ಗುರುತಿಸಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಮಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿತು.ಸೂಕ್ತ ಸ್ಮಶಾನವಿಲ್ಲದೆ ಶವಗಳನ್ನು ಕಾವೇರಿ ನದಿಯ ದಡದಲ್ಲಿ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಪಿಐಎಂ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ನೆಲ್ಲಿಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಒಟ್ಟು ಜನಸಂಖ್ಯೆಯಲ್ಲಿ ಶೇ. 45 ರಷ್ಟು ಮಂದಿ ಹಿಂದೂಗಳಿದ್ದು, ಸ್ಮಶಾನದ ಕೊರತೆ ಎದುರಾಗಿದೆ. ಶೇ.5 ರಷ್ಟು ಮಾತ್ರ ಸಣ್ಣ ಹಿಡುವಳಿದಾರರಿದ್ದು, ಮೃತಪಟ್ಟರೆ ಸ್ವಂತ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಅವರಿಗೆ ಅವಕಾಶವಿದೆ.ಆದರೆ ಉಳಿದಿರುವ ಶೇ.35 ರಷ್ಟು ಹಿಂದೂಗಳು ಬಡವರಾಗಿದ್ದು, ಆದಿವಾಸಿಗಳು, ದಲಿತರು, ಬಿಲ್ಲವರು, ಮೊಗೇರ ಮತ್ತಿತರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮನೆಯಲ್ಲಿ ಸಾವು ಸಂಭವಿಸಿದಾಗ ಗೌರವಯುತವಾಗಿ ಎಲ್ಲಿ ಸಂಸ್ಕಾರ ಮಾಡಬೇಕು ಎನ್ನುವ ಗೊಂದಲ ಇವರನ್ನು ಕಾಡುತ್ತಿದೆ. ಸ್ವಂತ ಭೂಮಿಯಿಲ್ಲದೆ ಬಾಡಿಗೆ ಮನೆ, ಲೈನ್ ಮನೆಗಳಲ್ಲೇ ಜೀವನ ಸಾಗಿಸಿ ಸತ್ತ ನಂತರವೂ ಶವ ಸಂಸ್ಕಾರಕ್ಕೆ ಸೂಕ್ತ ಅವಕಾಶ ಇಲ್ಲ ಎನ್ನುವ ಬೇಸರ ಈ ಸಮುದಾಯಕ್ಕೆ ಇದೆ. ಹಿಂದೂತ್ವದ ಬಗ್ಗೆ ಮಾತನಾಡುವವರು ಆಡಳಿತ ನಡೆಸಿದ ಸಂದರ್ಭದಲ್ಲೂ ನೆಲ್ಲಿಹುದಿಕೇರಿಯ ಹಿಂದೂಗಳಿಗೆ ಸ್ಮಶಾನದ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿದರು.
ಬೆಟ್ಟದಕಾಡು ರಸ್ತೆಯಲ್ಲಿರುವ ಕಾವೇರಿ ನದಿ ದಡದಲ್ಲಿ ಅರ್ಧ ಎಕರೆ ಜಾಗವಿದ್ದು, ಅಲ್ಲಿ ಶವ ಸಂಸ್ಕಾರ ಮಾಡಲಾಗುತ್ತಿದೆ. ಅಧಿಕ ಮಳೆಯ ಸಂದರ್ಭ ನದಿ ದಡದಲ್ಲಿ ಮಣ್ಣು ಕುಸಿಯುತ್ತಿದ್ದು, ಸಂಸ್ಕಾರ ಮಾಡಲಾದ ಶವದ ಅಸ್ತಿ ನದಿ ಪಾಲಾಗುತ್ತಿದೆ. ಇದರಿಂದ ನದಿ ಕಲುಷಿತಗೊಳ್ಳುತ್ತಿದೆ ಎಂದರು.ಗ್ರಾ.ಪಂ ಮೂಲಕ ಈಗಾಗಲೇ ಸ್ಮಶಾನಕ್ಕಾಗಿ ಗುರುತಿಸಲಾಗಿರುವ ಜಾಗ ಒತ್ತುವರಿಯಾಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಇದು ನಿಜವೇ ಆಗಿದ್ದರೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ತೆರವು ಕಾರ್ಯಾಚರಣೆ ನಡೆಸಬೇಕು. ಶೀಘ್ರ ಹಿಂದೂಗಳಿಗೆ ಪ್ರತ್ಯೇಕವಾದ ಸುಸಜ್ಜಿತ ಸ್ಮಶಾನದ ಜಾಗ ಮಂಜೂರು ಮಾಡಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾ.ಪಂ ಎದುರು ಶವದೊಂದಿಗೆ ಹೋರಾಟ ನಡೆಸುವುದಾಗಿ ಪಿ.ಆರ್.ಭರತ್ ಎಚ್ಚರಿಕೆ ನೀಡಿದರು.
ಗ್ರಾ. ಪಂ ಉಪಾಧ್ಯಕ್ಷರಾದ ಪ್ರಮೀಳ ಹಾಗೂ ಗ್ರಾಮ ಲೆಕ್ಕಿಗ ಸಚಿನ್ ಅವರು ಪ್ರತಿಭಟನಾಕಾರರರದಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಟಿ.ಟಿ.ಉದಯನ್, ಕೆ.ಯು.ಮೋನಪ್ಪ, ಯೂಸುಫ್, ಶಿವರಾಮನ್, ಎ.ಕೆ.ಮುಸ್ತಫ, ಕೆ.ಕೆ.ಚಂದ್ರನ್, ಪಿ.ವಿ.ರವಿ, ಬೋಜಿ, ಲಲಿತಮ್ಮ, ಕಾವೇರಿ, ವಿಜು, ಸಂತೋಷ್ ಮತ್ತಿತರರು ಪಾಲ್ಗೊಂಡಿದ್ದರು.