ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರಾತಿಗೆ ಆಗ್ರಹ

| Published : Feb 07 2024, 01:49 AM IST

ಸಾರಾಂಶ

ಹೊಳಲ್ಕೆರೆಯಲ್ಲಿ ಭೂಮಿ ವಸತಿ ಹೋರಾಟ ಸಮಿತಿಯ ಸದಸ್ಯರು ಬಗರ್ ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಬಳಿಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಬಗರ್ ಹುಕುಂ ಸಾಗುವಳಿದಾರರಿಗೆ ಜಮೀನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬೀಬಿ ಫಾತಿಮಾ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ರೈತರು ಅಮೃತ್ ಮಹಲ್ ಕಾವಲು ಸೇರಿದಂತೆ ವಿವಿಧ ಕಾವಲುಗಳು, ಗೋಮಾಳ, ಸೇಂದಿವನ, ಹುಲ್ಲುಬನ್ನಿಗಳಲ್ಲಿ ಜಮೀನು ಮಾಡಿ ಕೊಂಡು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಸುಮಾರು 25, 30 ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬಂದರೂ, ಅವರ ಹೆಸರಿಗೆ ಜಮೀನು ಮಂಜೂರು ಮಾಡಿಲ್ಲ. ಇದರಿಂದ ರೈತರಿಗೆ ಭದ್ರತೆ ಇಲ್ಲದಂತಾಗಿದೆ. ಜಮೀನು ತಮ್ಮ ಹೆಸರಿಗೆ ಇಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಫಾರಂ ನಂಬರ್ 50, 53 ಹಾಗೂ 57 ರಲ್ಲಿ ಅರ್ಜಿ ಸಲ್ಲಿರುವ ರೈತರಿಗೆ ತಕ್ಷಣವೇ ಭೂಮಿ ಮಂಜೂರು ಮಾಡಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆಯಲ್ಲಿನ ತೊಡಕು ಗಳನ್ನು ಶೀಘ್ರವೇ ಪರಿಹರಿಸಬೇಕು. ಅಮೃತ್ ಮಹಲ್ ಕಾವಲನ್ನು ರೈತರ ಹೆಸರಿಗೆ ಮಾಡಿಕೊಡಬೇಕು. ವಸತಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರವೇ ಹಕ್ಕುಪತ್ರ ನೀಡ ಬೇಕು. ಶಿವಗಂಗಾ ಗ್ರಾಮದ ಸರ್ವೆ ನಂಬರ್ 83, 84 ರಲ್ಲಿ ಸಾಗುವಳಿ ಮಾಡುತ್ತಿದ್ದ ಲಕ್ಷ್ಮಮ್ಮ ಕುಟುಂಬದವರನ್ನು ಒಕ್ಕಲೆಬ್ಬಿಸಿದ್ದು, ಅವರಿಗೆ ನ್ಯಾಯ ಕೊಡಬೇಕು. ರೈತರ ಮೇಲೆ ಹಾಕಿರುವ ಭೂಕಬಳಿಕೆ ದೂರುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಭೂಮಿ ವಸತಿ ಹೋರಾಟ ಸಮಿತಿಯ ಕರಿಯಪ್ಪ ಈಚಘಟ್ಟ, ಮಂಜುನಾಥ್, ಮೂರ್ತಣ್ಣ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಹನುಮಂತಪ್ಪ ಗೋನೂರು, ಸುಂದರಮ್ಮ, ಸತ್ಯಪ್ಪ ಮಲ್ಲಾಪುರ, ಜಿ.ಎನ್.ಮಹೇಶ್ವರಪ್ಪ, ಪುರುಷೋತ್ತಮ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ಸುಂದರಮೂರ್ತಿ, ನವೀನ್ ಮತ್ತಿತರರು ಇದ್ದರು