ಸಾರಾಂಶ
ಮುಂಡಗೋಡ: ಪಟ್ಟಣದಲ್ಲಿ ದೇಶಿ ಕ್ರೀಡೆ ಕುಸ್ತಿಗೆ ಅನುಕೂಲ ಕ್ಕಾಗಿ ಗರಡಿಮನೆ ನಿರ್ಮಾಣಕ್ಕಾಗಿ ಎರಡು ಗುಂಟೆ ಜಾಗವನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯವರಿಂದ ತಹಸೀಲ್ದಾರ್ ಮತ್ತು ಪಪಂ ಮುಖ್ಯಾಧಿಕಾರಿಗಳಿಗೆ ಸೋಮವಾರ ಮನವಿ ಅರ್ಪಿಸಲಾಯಿತು.ದೇಶಿ ಕ್ರೀಡೆಯಾದ ಕುಸ್ತಿಯು ಅಳಿವಿನಂಚಿನಲ್ಲಿದೆ. ಇದಕ್ಕೆ ಬೇಕಾದ ತರಬೇತುದಾರರು ಮತ್ತು ಗರಡಿಮನೆಗಳ ಅಭಾವದಿಂದಾಗಿ ನಮ್ಮ ದೇಶಿಯ ಕ್ರೀಡೆಯಾದ ಕುಸ್ತಿಯು ನಶಿಸಿ ಹೋಗುತ್ತಿದೆ. ಹಿಂದೆ ತಾಲೂಕಿನಲ್ಲಿ ಅನೇಕ ಕುಸ್ತಿಪಟ್ಟುಗಳಿದ್ದರು. ಹೊಸ ಓಣಿಯಲ್ಲಿ ಒಂದು ಗರಡಿ ಮನೆ ಇತ್ತು. ಅದರಲ್ಲಿ ತಾಲೀಮು ನಡೆಸಿದ ಕುಸ್ತಿಪಟುಗಳು ತಾಲೂಕಿಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದ್ದರು. ಆದರೆ ಈಗ ಈ ಕುಸ್ತಿಪಟುಗಳ ಸಂಖ್ಯೆ, ತರಬೇತುದಾರರು ಮತ್ತು ಗರಡಿ ಮನೆಗಳ ಅಭಾವದಿಂದಾಗಿ ಕುಸ್ತಿ ಕ್ರೀಡೆಗೆ ಆದ್ಯತೆ ಇಲ್ಲದಂತಾಗಿದೆ. ತಾಲೂಕಿನ ಯುವ ಕುಸ್ತಿಪಟುವಾದ ಗಂಗಾಧರ ವಿಜಯಕುಮಾರ್ ರಾಠೋಡ ದೇಶಿ ಕುಸ್ತಿಯಲ್ಲಿ ಜಿಲ್ಲಾಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ಅನೇಕ ಪದಕಗಳನ್ನು ಪಡೆದಿದ್ದಾರೆ. ಕುಸ್ತಿಪಟುಗಳಿಗೆ ಸರಿಯಾದ ತರಬೇತಿ ಮತ್ತು ಗರಡಿ ಮನೆಯನ್ನು ನಿರ್ಮಿಸಿದರೆ ಕ್ರೀಡಾಪಟುಗಳು ಇನ್ನೂ ಉನ್ನತ ಸ್ಥಾನಕ್ಕೆ ಏರುತ್ತಾರೆ ಎಂದರು.ಪಟ್ಟಣದಲ್ಲಿ ದೇಶಿ ಕ್ರೀಡೆಯಾದ ಕುಸ್ತಿಗೆ ಎರಡು ಗುಂಟೆ ಜಾಗವನ್ನು ಮಂಜೂರು ಮಾಡಬೇಕು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರು ಹಾಗೂ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಎಸ್.ಎಸ್. ಪಾಟೀಲ್, ಖೇಮಣ್ಣ ಲಮಾಣಿ, ಗೋವಿಂದಪ್ಪ ಬೆಂಡಗಟ್ಟಿ ಮುಂತಾದವರಿದ್ದರು.