ಭೂ ಕಂದಾಯ ಅಧಿನಿಯಮದ ತಿದ್ದುಪಡಿಗೆ ಆಗ್ರಹ

| Published : Oct 10 2024, 02:20 AM IST

ಸಾರಾಂಶ

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಾಯ್ದೆಯ ಭಾಗ 11ರ ಹಕ್ಕುಗಳಲ್ಲಿ ಕೆಲವೊಂದು ಬದಲಾವಣೆ ಅವಶ್ಯವಿದ್ದು, ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸೇಠ್ ಚುನಿಲಾಲ್ ಅಮರಚಂದ್ ಬೊಹರಾ ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ವಕೀಲ ಎಚ್. ಜಗದೀಶ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಾಯ್ದೆಯ ಭಾಗ 11ರ ಹಕ್ಕುಗಳಲ್ಲಿ ಕೆಲವೊಂದು ಬದಲಾವಣೆ ಅವಶ್ಯವಿದ್ದು, ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಸೇಠ್ ಚುನಿಲಾಲ್ ಅಮರಚಂದ್ ಬೊಹರಾ ಕಾನೂನು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ, ವಕೀಲ ಎಚ್. ಜಗದೀಶ ಆಗ್ರಹಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾಯ್ದೆಯ 127ನೇ ಸೆಕ್ಷನ್‌ನಿಂದ 136ನೇ ಸೆಕ್ಷನ್‌ವರೆಗೂ ಕೆಲವೊಂದು ನಿಯಮಗಳಿದ್ದು, ಅವು ಬಡ ರೈತರಿಗೆ ಸಂಕಷ್ಟ ತಂದೊಡ್ಡಿವೆ. ಜಮೀನು ವ್ಯಾಜ್ಯಗಳ ತೀರ್ಪು ನೀಡುವ ಅಧಿಕಾರವನ್ನು ನಾಡ ತಹಸೀಲ್ದಾರ್‌ರಿಗೆ ನೀಡಲಾಗಿದೆ. ಅದು ಕೂಡ ನ್ಯಾಯಾಧೀಶರ ದರ್ಜೆ ಹಕ್ಕಾಗಿದ್ದು, ಸಾಕಷ್ಟು ಸಂದರ್ಭಗಳಲ್ಲಿ ದುರ್ಬಳಕೆ ಆಗುತ್ತಿದೆ ಎಂದು ತಿಳಿಸಿದರು.

ಅಲ್ಲದೇ, ಗ್ರಾಮ ಲೆಕ್ಕಾಧಿಕಾರಿಗಳು ಉದ್ದೇಶ ಪೂರಕವಾಗಿಯೇ ತಕರಾರು ಅರ್ಜಿ ಹಾಕಿಸುತ್ತಿದ್ದು, ಕೆಲ ರೈತರು ಅನಗತ್ಯವಾಗಿ ನ್ಯಾಯಕ್ಕಾಗಿ ಅಲೆಯುವಂತಾಗಿದೆ. ಈ ವ್ಯವಸ್ಥೆ ಬದಲಾಗಬೇಕಾದರೆ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರವು ಗಂಭೀರ ಚಿಂತನೆ ಮಾಡಬೇಕು ಎಂದರು.

ಕಂದಾಯ ನ್ಯಾಯಾಲಯಗಳಲ್ಲಿ ವಕೀಲರು ಎಷ್ಟೇ ವಾದಿಸಿದರೂ ಕೆಲವೊಮ್ಮೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ವ್ಯತಿರಿಕ್ತ ತೀರ್ಪುಗಳು ನೀಡುವ ಸಾಧ್ಯತೆಗಳಿವೆ. ಇದರಿಂದ ರೈತರಿಗೆ ಅನ್ಯಾಯವಾಗುವುದನ್ನು ತಡೆಗಟ್ಟಲು ಆಗುತ್ತಿಲ್ಲ. ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗದೆ ವರ್ಷಾನುಗಟ್ಟಲೇ ಬಾಕಿ ಉಳಿದಿವೆ. ಕಂದಾಯ ನ್ಯಾಯಾಲಯಗಳಿಗಿರುವ ಅಧಿಕಾರವನ್ನು ಜೆಎಂಎಫ್ ನ್ಯಾಯಾಧೀಶರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ರಾಜೇಶ ಎನ್.ಎಸ್., ಕೆ. ಪ್ರಹ್ಲಾದ ರಾವ್, ವಿನೋದ ಇದ್ದರು.