Demand for amenities at Murugharajendra Stadium
-ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರಿಗೆ ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ಶನಿವಾರ ಮನವಿ ಸಲ್ಲಿಸಿದೆ.
ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣಕ್ಕೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ವಾಕಿಂಗ್, ವ್ಯಾಯಾಮ, ಓಟ ಹಾಗೂ ಕ್ರಿಕೆಟ್, ಹ್ಯಾಂಡ್ಬಾಲ್, ಟೇಕ್ವಾಂಡೋ ಮುಂತಾದ ಕ್ರೀಡೆಗಳ ಅಭ್ಯಾಸಕ್ಕಾಗಿ ಆಗಮಿಸುತ್ತಾರೆ. ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಮೈದಾನದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ತೀವ್ರವಾಗಿದೆ.ಮೈದಾನದಲ್ಲಿ ವಿಶ್ರಾಂತಿ ಪಡೆಯಲು ಆಸನಗಳ ವ್ಯವಸ್ಥೆ ಇಲ್ಲದಿರುವುದರಿಂದ ವೃದ್ಧರು ಹಾಗೂ ವಾಯುವಿಹಾರಿಗಳು ದಣಿವಾರಿಸಿಕೊಳ್ಳಲು ನೆಲದ ಮೇಲೆ ಅಥವಾ ಬಂಡೆಗಳ ಮೇಲೆ ಕೂರಬೇಕಾದ ಸ್ಥಿತಿ ಇದೆ. ಅಲ್ಲದೆ, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯವಿಲ್ಲದೆ ಸರ್ಕಾರಿ ವಿಜ್ಞಾನ ಹಾಗೂ ಕಲಾ ಕಾಲೇಜಿನ ವಿದ್ಯಾರ್ಥಿಗಳು ಬಯಲನ್ನೇ ಆಶ್ರಯಿಸಬೇಕಾಗಿರುವುದು ಮುಜುಗರ ತಂದಿದೆ. ಮೈದಾನದ ಅಗ್ನೇಯ ಭಾಗದಲ್ಲಿ ರಾತ್ರಿ ವೇಳೆ ಕೆಲವರು ಮದ್ಯಪಾನ ಮಾಡಿ ಬಾಟಲಿಗಳನ್ನು ಒಡೆದು ಹಾಕುತ್ತಿದ್ದು, ಇದರಿಂದ ಬೆಳಗಿನ ವಾಯುವಿಹಾರಿಗಳ ಕಾಲಿಗೆ ಗಾಜು ಚುಚ್ಚಿ ಗಾಯಗೊಂಡಿರುವ ನಿದರ್ಶನಗಳಿವೆ.
ಈ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ಮೈದಾನದಲ್ಲಿ ಮರಗಳ ಕೆಳಗೆ ಆಸನ ವ್ಯವಸ್ಥೆ, ಶೌಚಾಲಯ ನಿರ್ಮಾಣ ಹಾಗೂ ಅಗ್ನೇಯ ಮೂಲೆಯಲ್ಲಿ ಹೈಮಾಸ್ಟ್ ಬೀದಿ ದೀಪವನ್ನು ಅಳವಡಿಸಿಕೊಡಬೇಕೆಂದು ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಲೋಕೇಶ್ವರಸ್ವಾಮಿ, ಕಾರ್ಯದರ್ಶಿ ಸತೀಶ್ ಕುಮಾರ್, ಉಪಾಧ್ಯಕ್ಷ ರಾಘವೇಂದ್ರ, ಖಜಾಂಚಿ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.------------------
ಪೋಟೋ ಕ್ಯಾಪ್ಸನ್ನಗರದ ಶ್ರೀ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಸ್.ರಮ್ಯಾ ಅವರಿಗೆ ಎಲೈಟ್ ಈಗಲ್ಸ್ ಕ್ರಿಕೆಟ್ ಕ್ಲಬ್ ಶನಿವಾರ ಮನವಿ ಸಲ್ಲಿಸಿದೆ.
----------ಪೋಟೋ ಫೈಲ್ ನೇಮ್-31 ಸಿಟಿಡಿ4