ಅಡಕೆ ಬೆಳೆಗೆ ತೀವ್ರವಾಗಿ ಬಾಧಿಸಿದ ಎಲೆಚುಕ್ಕಿ ರೋಗ ಹಾಗೂ ಕೊಳೆರೋಗಪೀಡಿತ ಪ್ರದೇಶಕ್ಕೆ ಸರ್ಕಾರದಿಂದ ಅಧ್ಯಯನ ತಂಡ ಕಳುಹಿಸಿ, ಅಡಕೆ ಬೆಳೆಗಾರರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಲು ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟವಾದ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಸರ್ಕಾರವನ್ನು ಆಗ್ರಹಿಸಿದೆ.
ಶಿರಸಿ: ಅಡಕೆ ಬೆಳೆಗೆ ತೀವ್ರವಾಗಿ ಬಾಧಿಸಿದ ಎಲೆಚುಕ್ಕಿ ರೋಗ ಹಾಗೂ ಕೊಳೆರೋಗಪೀಡಿತ ಪ್ರದೇಶಕ್ಕೆ ಸರ್ಕಾರದಿಂದ ಅಧ್ಯಯನ ತಂಡ ಕಳುಹಿಸಿ, ಅಡಕೆ ಬೆಳೆಗಾರರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಲು ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟವಾದ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಸರ್ಕಾರವನ್ನು ಆಗ್ರಹಿಸಿದೆ.
ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಪತ್ರ ಮೂಲಕ ವಿನಂತಿಸಲಾಗಿದ್ದು, ಅಡಕೆ ಬೆಳೆಗಾರರು ಪ್ರಸಕ್ತ ವರ್ಷ ಅನುಭವಿಸುತ್ತಿರುವ ಸಂಕಷ್ಟದ ಸ್ಥಿತಿಯನ್ನು ಮನವಿಯಲ್ಲಿ ವಿವರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟೂ ಭೌಗೋಳಿಕ ಕ್ಷೇತ್ರದ ಶೇ. 32ರಷ್ಟು ಕ್ಷೇತ್ರದಲ್ಲಿ ಅಡಕೆ ಬೆಳೆಯುತ್ತಿದ್ದು, ವಾರ್ಷಿಕ ಸರಾಸರಿ 12,000 ಮೆಟ್ರಿಕ್ ಟನ್ ಅಷ್ಟು ಉತ್ಪಾದಿಸಲಾಗುತ್ತಿದೆ. ರಾಜ್ಯದಲ್ಲಿ ಶೇ. 14ರಷ್ಟು ಗುಣಮಟ್ಟದ ಅಡಿಕೆಯನ್ನು ನಮ್ಮ ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತದೆ. ಅಲ್ಲದೇ ಶಿರಸಿ ಅಡಕೆ ಜಿಐ ಟ್ಯಾಗ್‌ನ್ನೂ ಹೊಂದಿದೆ.ಅಡಕೆ ಬೆಳೆಯನ್ನು ನಂಬಿ ಕೇವಲ ಅಡಕೆ ಬೆಳೆಗಾರರು ಮಾತ್ರವಲ್ಲದೆ, ಈ ಬೆಳೆಯನ್ನು ಸಂಸ್ಕರಿಸುವ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಹಾಗೂ ಈ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅದೆಷ್ಟೋ ಲಕ್ಷ ಕೃಷಿ ಕೂಲಿಕಾರರ ಕುಟುಂಬ ಈ ಬೆಳೆಯ ಮೇಲೆ ಅವಲಂಬಿತವಾಗಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಈ ಮೂರು ತಾಲೂಕುಗಳ ಒಟ್ಟೂ 22,186 ಹೆಕ್ಟೇರ್ ಅಡಕೆ ಕ್ಷೇತ್ರದಲ್ಲಿ, 11,732 ಹೆಕ್ಟೇರ್ ಕ್ಷೇತ್ರ ಎಲೆಚುಕ್ಕೆ ರೋಗಪೀಡಿತವಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ. ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದ ಕಾರಣದಿಂದಾಗಿ ಪ್ರಸ್ತುತ ವರ್ಷ ಅಡಕೆ ಇಳುವರಿ ಸರಾಸರಿ ಶೇ. 20ರಿಂದ ಶೇ. 45 ಮಾತ್ರವಿದೆ. ಈ ರೋಗದ ಪರಿಣಾಮವಾಗಿ ಬಹಳ ರೈತರು ಮನೋಸ್ಥೈರ್ಯ ಕಳೆದುಕೊಳ್ಳುವ ಹಂತ ತಲುಪಿದ್ದಾರೆ. ನಮ್ಮ ಜಿಲ್ಲೆಯ ಅಡಕೆ ಕೃಷಿಕರ ಸಂಕಷ್ಟ ಪರಿಗಣಿಸಿ, ಶೀಘ್ರವಾಗಿ ಅಧ್ಯಯನ ತಂಡವನ್ನು ರೋಗಪೀಡಿತ ಪ್ರದೇಶಗಳಿಗೆ ಕಳುಹಿಸಿ, ಬೆಳೆಗಾರರಿಗೆ ಪರಿಹಾರದ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ವಿನಂತಿಸಲಾಗಿದೆ.
ಅಗತ್ಯ ಕ್ರಮವಾಗಲಿ: ಪ್ರಸಕ್ತ ವರ್ಷ ಅಡಕೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ರೋಗಬಾಧೆಯಿಂದ ಅಡಕೆ ಇಳುವರಿ ತೀವ್ರತರನಾಗಿ ಕುಸಿತ ಕಂಡಿದೆ. ಅಡಕೆ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರ ದೊರಕದಿದ್ದಲ್ಲಿ ರೈತರ ಜೀವನ ನಿರ್ವಹಣೆ ಕಷ್ಟಕರವಾಗಲಿದೆ. ಜನಪ್ರತಿನಿಧಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ರೈತರಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಉಕ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹೇಳಿದರು.