ಬಿಳಿಗಿರಿಕೊಪ್ಪದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಗೆ ಈಗಾಗಲೇ ಆಯ್ಕೆಯಾಗಿದೆ.

ಶಿರಸಿ: ತಾಲೂಕಿನ ಉಂಚಳ್ಳಿ ಗ್ರಾಪಂ ವ್ಯಾಪ್ತಿಯ ಬಿಳಿಗಿರಿಕೊಪ್ಪದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಉರ್ದು ಮಾಧ್ಯಮದ ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಯನ್ನು ಆಯ್ಕೆ ಮಾಡುವಂತೆ ಆಗ್ರಹಿಸಿ, ಪಾಲಕರು ಹಾಗೂ ಊರ ನಾಗರಿಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ವಿನಂತಿಸಿದರು.

ಕಳೆದ ೬ ತಿಂಗಳ ಹಿಂದೆ ತಾಲೂಕಿನ ಉಂಚಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿರುವ ಬಿಳಿಗಿರಿಕೊಪ್ಪದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಗೆ ಈಗಾಗಲೇ ಆಯ್ಕೆಯಾಗಿದೆ. ಆಯ್ಕೆಯನ್ನು ಸರ್ಕಾರದ ಸುತ್ತೋಲೆಯಂತೆ ಉರ್ದು ಮಾಧ್ಯಮದ ಶಿಕ್ಷಕಿ ಹಾಗೂ ಸಹಾಯಕಿಯನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿತ್ತು. ಸರ್ಕಾರಿ ಸುತ್ತೋಲೆಯಲ್ಲಿರುವ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಉಲ್ಲಂಘಿಸಿ, ಹುದ್ದೆಗೆ ಸಂಬಂಧಿಸಿದಂತೆ ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ನೇಮಾಕಾತಿ ಮಾಹಿತಿ ನೀಡದೇ, ಉರ್ದು ಮಾಧ್ಯಮದಲ್ಲಿ ಜ್ಞಾನವಿಲ್ಲದ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಅಂಗನವಾಡಿ ಕೇಂದ್ರದಲ್ಲಿ ಒಟ್ಟು ೧೮ ಮಕ್ಕಳಿದ್ದು, ಅದರಲ್ಲಿ ೧೪ ಮಕ್ಕಳು ಉರ್ದು ಭಾಷೆಯ ಮಕ್ಕಳಿವೆ. ಅವರ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಂದುವರೆಸಬೇಕಾಗಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಉರ್ದು ಭಾಷೆಯಲ್ಲಿಯೇ ಶಿಕ್ಷಣವನ್ನು ನೀಡುವುದು ಅವರ ಭವಿಷ್ಯದ ದೃಷ್ಟಿಯಿಂದ ಅವಶ್ಯವಾಗಿದೆ. ಸರ್ಕಾರದ ಸುತ್ತೋಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನೇಮಕಾತಿ ಮಾಡಬೇಕಾದಲ್ಲಿ ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗೆ ಉರ್ದು ಭಾಷೆಯಲ್ಲಿ ಪರಿಣತಿ ಹೊಂದಿದವರನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ. ಆದರೆ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾಹಿತಿ ಕೊರತೆಯಿಂದ ಮಾಧ್ಯಮದಲ್ಲಿ ಜ್ಞಾನ ಹೊಂದಿರುವ ಯಾವುದೇ ಅರ್ಹ ಅಭ್ಯರ್ಥಿಗಳು ಅಂಗನವಾಡಿ ಕೇಂದ್ರದ ಶಿಕ್ಷಕಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿಲ್ಲ. ಆ ಹುದ್ದೆಗೆ ಉರ್ದು ಮಾಧ್ಯಮ ಬಾರದೇ ಇರುವ ಅನರ್ಹ ಅಭ್ಯಥಿಗಳನ್ನು ಶಿಕ್ಷಕಿ ಹಾಗೂ ಸಹಾಯಕಿ ಹುದ್ದೆಗೆ ನೇಮಕಾತಿ ಮಾಡಿರುವುದರಿಂದ ಉರ್ದು ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಕಲಿಕೆಗೆ ತೀವ್ರವಾಗಿ ತೊಂದರೆಯಾಗುತ್ತಿದೆ. ಶಿಕ್ಷಣದ ತಳಪಾಯದಂತಿರುವ ಅಂಗನವಾಡಿ ಕೇಂದ್ರಕ್ಕೆ ಉರ್ದು ಮಾಧ್ಯಮದಲ್ಲಿ ತಿಳುವಳಿಕೆ ಅಥವಾ ಜ್ಞಾನ ಇರುವ ಶಿಕ್ಷಕಿ ಮತ್ತು ಸಹಾಯಕಿಯನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ಹೊಸದಾಗಿ ಉರ್ದು ಮಾಧ್ಯಮವನ್ನು ಬಲ್ಲಂತಹ ಅರ್ಹ ಶಿಕ್ಷಕಿ ಹಾಗೂ ಸಹಾಯಕಿಯನ್ನು ಆಯ್ಕೆ ಮಾಡಿಕೊಳ್ಳುವವರೆಗೆ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಭವಿಷ್ಯದ ದೃಷ್ಟಿಯಿಂದ, ಅದೇ ಗ್ರಾಮದಲ್ಲಿನ ಸರ್ಕಾರಿ ಉರ್ದು ಹಿ.ಪ್ರಾ. ಶಾಲೆಯ ಆವರಣದಲ್ಲಿರುವ ಉರ್ದು ಮಾಧ್ಯಮದ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕು. ಈ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದಲ್ಲಿ ಅನಿವಾರ್ಯವಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದು ಎಚ್ಚರಿಸಿದ್ದಾರೆ.