ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಆರೋಪ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ 94 ಕೋಟಿ ರು. ಗಳನ್ನು ಖಾಸಗಿಯವರಿಗೆ ವರ್ಗಾವಣೆ ಮಾಡಿರುವ ಆರೋಪ ಹೊತ್ತು ಜೈಲಿಗೆ ಹೋಗಿ ಬೇಲ್ ಮೇಲೆ ಹೊರ ಬಂದಿರುವ ಸಚಿವ ಬಿ. ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಾವ ನೈತಿಕತೆಯಿಂದ ಮತ್ತೆ ಸಚಿವ ಸ್ಥಾನ ನೀಡಿದ್ದಾರೆ. ಅವರನ್ನೂ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಚಿವರಾಗಿದ್ದ ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಖಾಸಗಿ ಖಾತೆಗೆ ವರ್ಗಾವಣೆ ಮಾಡಿದ ಪ್ರಕರಣದ ಆರೋಪಿಯಾಗಿದ್ದಾರೆ. ಆ ವೇಳೆ ನಾಗೇಂದ್ರ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು. ಖಾಸಗಿಯವರ ಖಾತೆಗೆ ವರ್ಗಾವಣೆಯಾದ ಹಣವನ್ನು ತೆಲಂಗಾಣ ಹಾಗೂ ರಾಜ್ಯದ ಲೋಕಸಭಾ ಚುವಾವಣೆಗೆ ಬಳಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಸಚಿವ ನಾಗೇಂದ್ರ ಅವರು ಪ್ರಕರಣದ ಆರೋಪಿಯಾಗಿದ್ದಾರೆ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು ಎಂದು ಬಿಜೆಪಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿದೆ ಎಂದು ಹೇಳಿದರು.ಜಿಲ್ಲಾ ಬಿಜೆಪಿ ನಾಯಕ ವೈ.ಎಚ್. ಹುಚ್ಚಯ್ಯ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರು. ಅವ್ಯವಹಾರದ ಪ್ರಮುಖ ಆರೋಪಿ ಎಂಬ ಆರೋಪದಲ್ಲಿ ನಾಗೇಂದ್ರ ಅವರು ಜೈಲಿಗೆ ಹೋಗಿದ್ದರು. ಅವರನ್ನು ಹಿಂದೆ ಸಚಿವ ಸ್ಥಾನದಿಂದ ಕಿತ್ತುಹಾಕಿದ್ದರು. ಆದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೆ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿರುವುದು ಖಂಡನೀಯ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ವಾಲ್ಮೀಕಿ ಸಮಾಜ ಮುಖಂಡ ಊರುಕೆರೆ ವಿಜಯಕುಮಾರ್, ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ದಿಲೀಪ್ ಮಾತನಾಡಿ, ವಾಲ್ಮೀಕಿ ಸಮಾಜಕ್ಕೆ ಮೀಸಲಾಗಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿ ಸಮಾಜಕ್ಕೆ ಅನ್ಯಾಯ ಮಾಡಿದ ಸಚಿವ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಬಾರದು, ಇವರ ಬದಲು ಹಿರಿಯ ಶಾಸಕರಾದ ತುಮಕೂರಿನ ಕೆ.ಎನ್. ರಾಜಣ್ಣ, ಮೊಳಕಾಲ್ಮೂರಿನ ಎನ್.ವೈ. ಗೋಪಾಲಕೃಷ್ಣ ಅವರನ್ನು ಮಂತ್ರಿ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಎಚ್. ಹನುಮಂತರಾಜು ನಾಗರತ್ನಮ್ಮ, ಎ ಚ್.ಎಂ. ರವೀಶಯ್ಯ, ಕೆ. ವೇದಮೂರ್ತಿ, ಗಣೇಶ್‌ಪ್ರಸಾದ್, ಸತ್ಯಮಂಗಲ ಜಗದೀಶ್ಧ ನುಷ್, ವಿರೂಪಾಕ್ಷಪ್ಪ, ಹನುಮಂತರಾಜು, ವಸಂತಮ್ಮ, ನಂದೀಶ್, ರುದ್ರೇಶ್, ಬನಶಂಕರಿಬಾಬು, ಬಂಬು ಮೋಹನ್, ರಾಕೇಶ್, ವಿನಯ್ ಜೈನ್, ಪ್ರೀತಂ ಜೈನ್, ಮಲ್ಲಿಕಾರ್ಜುನಯ್ಯ, ಜೆ. ಜಗದೀಶ್, ವೆಂಕಟೇಶ್, ಪುರುಷೋತ್ತಮ್, ನಿಸರ್ಗ ರಮೇಶ್, ರವಿ ಚೆಂಗಾವಿ, ಗಂಗೇಶ್ ಹದ್ದಿನಕಲ್ಲು, ಹೆಚ್. ರಾಯಪ್ಪ. ಸಿದ್ಧಲಿಂಗಯ್ಯ, ವೆಂಕಟೇಶಾಚಾರ್ ಮೊದಲಾದವರು ಭಾಗವಹಿಸಿದ್ದರು.
