ಅಡಕೆ ಆಮದು ನಿಷೇಧ, ೪೫೦ ರು. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹ

| Published : Mar 13 2024, 02:02 AM IST

ಸಾರಾಂಶ

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ವಿದೇಶದಿಂದ ಸಾವಿರಾರು ಟನ್ ಅಡಕೆ ಬರುತ್ತಿದೆ, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ದೆಹಲಿ ಮಾದರಿಯ ಹೋರಾಟ ನಡೆಯಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಳಪೆ ಗುಣಮಟ್ಟದ ಅಡಕೆ ಆಮದು ಮಾಡುತ್ತಿರುವುದರಿಂದ ಉತ್ತಮ ಗುಣಮಟ್ಟದ ನಮ್ಮ ದೇಶೀಯ ಅಡಕೆಯ ಬೆಲೆ ಕುಸಿದು ಬೆಳೆಗಾರರು ಕಂಗಾಲಾಗಿದ್ದಾರೆ. ಕೂಡಲೇ ಅಡಕೆ ಆಮದು ನಿಷೇಧಿಸಬೇಕು ಮತ್ತು ಅಡಕೆಗೆ ಕನಿಷ್ಠ ೪೫೦ ರುಪಾಯಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಮೂಡುಬಿದಿರೆಯಲ್ಲಿ ಬೃಹತ್ ಪ್ರತಿಭಟನ ಜಾಥಾ ಮಂಗಳವಾರ ನಡೆಯಿತು. ಸಮಾಜಮಂದಿರದಿಂದ ಹೊರಟ ಪ್ರತಿಭಟನ ಜಾಥಾ ಪೇಟೆಯ ಮೂಲಕ ಸಾಗಿ ತಾಲೂಕು ಆಡಳಿತ ಸೌಧ ತಲುಪಿತು.

ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ರಾಜಕಾರಣಿಗಳು, ವ್ಯಾಪಾರಿಗಳು, ದಲ್ಲಾಳಿಗಳಿಂದ ರೈತರು ಶೋಷಣೆಗೊಳಗಾಗುತ್ತಿದ್ದಾರೆ. ಇದರಿಂದಾಗಿ ದೇಶದಲ್ಲಿ ಸುಮಾರು ೭ ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ, ವ್ಯಾಪಾರಿಗಳು, ದಲ್ಲಾಳಿಗಳಿಂದ ರೈತರನ್ನು ರಕ್ಷಿಸಬೇಕು. ವೆಚ್ಚ ಆಧಾರಿತ ಬೆಲೆ ನಿಗದಿಪಡಿಸಬೇಕು. ರೈತರು ಪ್ರತಿ ಗ್ರಾಮಗಳಲ್ಲಿ ಸಂಘಟಿತರಾಗಬೇಕು ಎಂದು ಕರೆ ನೀಡಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ ವಿದೇಶದಿಂದ ಸಾವಿರಾರು ಟನ್ ಅಡಕೆ ಬರುತ್ತಿದೆ, ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ದೆಹಲಿ ಮಾದರಿಯ ಹೋರಾಟ ನಡೆಯಬೇಕಿದೆ ಎಂದರು. ರೈತ ಮುಖಂಡ ವಲೇರಿಯನ್ ಕುಟಿನ್ಹಾ ಮಾತನಾಡಿ ಮೂಡುಬಿದಿರೆಯಲ್ಲಿ ಅಡಕೆ, ಕೊಬ್ಬರಿ ಖರೀದಿ ಕೇಂದ್ರ ತೆರೆಯಬೇಕು ಎಂದರು. ರೊನಾಲ್ಡ್ ಸೆರಾವೋ ಮನವಿಪತ್ರ ವಾಚಿಸಿದರು. ಜೋಯ್ಲಸ್ ಡಿಸೋಜ ಸ್ವಾಗತಿಸಿದರು. ಭಾಸ್ಕರ ಆಚಾರ್ಯ ನಿರೂಪಿಸಿದರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.