ಸಾರಾಂಶ
ಎತ್ತು, ಚಕ್ಕಡಿ, ಟ್ರ್ಯಾಕ್ಟರ್, ಬೈಕ್, ಟಂಟಂ, ಅಟೋಗಳು ಸಂಚಾರ ಮಾಡದ ಸ್ಥಿತಿ
ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ತೇರಿನ ಮನೆಯಿಂದ ದೂದಪೀರಾ ದರ್ಗಾಕ್ಕೆ ಹೋಗುವ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಜನಹಿತ ಹೋರಾಟಗಾರರು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶರಣು ಗೋಡಿ ಮಾತನಾಡಿ, ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಲಕ್ಷ್ಮೇಶ್ವರ ಪಟ್ಟಣಕ್ಕೆ ಸರಿಯಾದ ಮೂಲ ಸೌಲಭ್ಯ ಇಲ್ಲದೆ ಹಿಂದುಳಿದ ಪ್ರದೇಶವಾಗಿ ಗುರುತಿಸಲ್ಪಡುತ್ತಿದೆ. ಪಟ್ಟಣದಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿದ್ದು ಹಾಗೂ ಪಟ್ಟಣದ ಸೋಮೇಶ್ವರ ತೇರಿನ ಮನೆಯ ಹತ್ತಿರದಿಂದ ಹಿಡಿದು ದೂದಪೀರಾ ದರ್ಗಾಕ್ಕೆ ಸಂಪರ್ಕ ಕಲ್ಪಿಸುವ ಬಜಾರ್ ರಸ್ತೆಯವರೆಗೆ 2 ಅಡಿಗೂ ಹೆಚ್ಚು ಗುಂಡಿ ತೋಡಿ ರಸ್ತೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ರೈತಾಪಿ ವರ್ಗದ ಜನರು ಹೆಚ್ಚಾಗಿರುವ ಓಣಿಯಲ್ಲಿ ಪ್ರತಿನಿತ್ಯ ಹೊಲಕ್ಕೆ ಹೋಗಿ ಬರುವ ಎತ್ತು ಚಕ್ಕಡಿ, ಟ್ರ್ಯಾಕ್ಟರ್, ಬೈಕ್, ಟಂಟಂ, ಅಟೋಗಳು ಸಂಚಾರ ಮಾಡದ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.ಕಳೆದ 2 ತಿಂಗಳ ರಸ್ತೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಮತ್ತೆ ಇತ್ತ ಕಡೆಗೆ ತಲೆ ಹಾಕಿಲ್ಲವಾದ್ದರಿಂದ ರಸ್ತೆಯಲ್ಲಿ ಮಳೆ ನೀರು ನಿಂತುಕೊಂಡು ಕೊಳಚೆ ಪ್ರದೇಶವಾಗಿದೆ. ಮೊದಲೆ ಡೆಂಘೀ ರೋಗ ಉಲ್ಬಣವಾಗಿದ್ದರಿಂದ ಮಕ್ಕಳು ಮರಿಗಳು ಇಲ್ಲಿ ಸಂಚಾರ ಮಾಡದಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ನಗರೋತ್ಥಾನದಲ್ಲಿ ಈ ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಡಾ. ವೆಂಕಟೇಶ ನಾಯ್ಕ್, ತಹಸೀಲ್ದಾರ ವಾಸುದೇವ ಸ್ವಾಮಿ, ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ, ನಗರೋತ್ಥಾನ ಎಇಇ ಶ್ಯಾಮಲ್, ಇಇ ಶರಣು ಓಣಿ, ನಾಗೇಶ ಅಮರಾಪೂರ, ಇಸ್ಮಾಯಿಲ್ ಆಡೂರ ಇದ್ದರು.