ಲಂಚಕ್ಕೆ ಬೇಡಿಕೆ: ಉಪತಹಸೀಲ್ದಾರ್, ಕಂಪ್ಯೂಟರ್ ಆಪರೇಟರ್ ಲೋಕಾ ಬಲೆಗೆ

| Published : Oct 10 2025, 01:00 AM IST

ಸಾರಾಂಶ

ವಂಶವೃಕ್ಷ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 2 ಸಾವಿರ ರು. ಸ್ವೀಕರಿಸುತ್ತಿದ್ದ ನಾಡ ಕಚೇರಿಯ ಉಪ ತಹಸೀಲ್ದಾರ್ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.

ಹಾವೇರಿ:ವಂಶವೃಕ್ಷ ಪೂರೈಸಲು ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ 2 ಸಾವಿರ ರು. ಸ್ವೀಕರಿಸುತ್ತಿದ್ದ ನಾಡ ಕಚೇರಿಯ ಉಪ ತಹಸೀಲ್ದಾರ್ ಹಾಗೂ ಕಂಪ್ಯೂಟರ್ ಆಪರೇಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಗುರುವಾರ ನಡೆದಿದೆ.ಹಾನಗಲ್ಲ ತಾಲೂಕು ಬಮ್ಮನಹಳ್ಳಿಯ ನಾಡಕಚೇರಿ ಉಪ ತಹಸೀಲ್ದಾರ್ ನಾಗರಾಜ ಸೂರ್ಯವಂಶಿ ಹಾಗೂ ಕಂಪ್ಯೂಟರ್ ಆಪರೇಟರ್ ಕಿರಣ್ ಮುದಕಣ್ಣನವರ ಬಂಧಿಸಲಾಗಿದೆ. ದೂರುದಾರ ಹಾನಗಲ್ಲ ತಾಲೂಕು ಯಳವಟ್ಟಿಯ ಗಂಗಾಧರ ಕ್ಯಾತನಕೇರಿ ಎಂಬುವವರು ತಮ್ಮ ಸಂಬಂಧಿಕರಾದ ದಯಾನಂದ ರುದ್ರಪ್ಪ ಯಲಿಗಾರ ಅವರ ವಂಶವೃಕ್ಷ ಪಡೆಯಲು ಬಮ್ಮನಹಳ್ಳಿ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗ, ಆಪಾದಿತರು 15 ಸಾವಿರ ರು.ಗೆ ಬೇಡಿಕೆ ಇಟ್ಟು, ಮುಂಗಡವಾಗಿ 2 ಸಾವಿರ ರು. ಲಂಚವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ದಾವಣಗೆರೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಮಧುಸೂದನ ಸಿ. ನೇತೃತ್ವದಲ್ಲಿ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ವಿಶ್ವನಾಥ ಕಬ್ಬೂರಿ, ದಾದಾವಲಿ ಕೆ.ಎಚ್. ಸೇರಿದಂತೆ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.