ಡಿ. ೨೨ರಂದು ಮುಖ್ಯೋಪಾಧ್ಯಾಯ ಕಳಕಪ್ಪ ಸಿದ್ದಪ್ಪ ರಾಜೂರು ₹೪ ಸಾವಿರ ಲಂಚದ ಹಣ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗಜೇಂದ್ರಗಡ: ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲು ಹಾಗೂ ತರಬೇತಿ ನೀಡಿದ್ದರ ಗೌರವಧನ ಬಿಡುಗಡೆ ಮಾಡಲು ಮುಖ್ಯೋಪಾಧ್ಯಾಯರೊಬ್ಬರು ಲಂಚ ಪಡೆಯುವ ವೇಳೆ ಸೋಮವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಮುಶಿಗೇರಿ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ಕಳಕಪ್ಪ ಸಿದ್ದಪ್ಪ ರಾಜೂರು ಎಂಬವರೇ ಲಂಚಕ್ಕೆ ಬೇಡಿಕೆ ಇಟ್ಟ ಮುಖ್ಯೋಪಾಧ್ಯಾಯ.ಆನಂದ ವಿರುಪಾಕ್ಷಪ್ಪ ವಾಲ್ಮೀಕಿ ಎಂಬವರು ಮುಶಿಗೇರಿ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ್ದರು. ತರಬೇತಿ ನೀಡಿದ್ದರ ಗೌರವಧನ ₹೯ ಸಾವಿರ ಮಂಜೂರು ಮಾಡುವಂತೆ ಆನಂದ ವಿರುಪಾಕ್ಷಪ್ಪ ವಾಲ್ಮೀಕಿ ಅವರು ಮುಖ್ಯೋಪಾಧ್ಯಾಯ ಕಳಕಪ್ಪ ಸಿದ್ದಪ್ಪ ರಾಜೂರು ಅವರಲ್ಲಿ ವಿನಂತಿಸಿದ್ದರು.
ಮುಖೋಪಾಧ್ಯಾಯ ಕಳಕಪ್ಪ ಸಿದ್ದಪ್ಪ ರಾಜೂರು ಅವರು, ತರಬೇತುದಾರರಿಗೆ ಕರಾಟೆ ತರಬೇತಿ ನೀಡಲು ಅನುಮತಿ ನೀಡಿದ ಬಗ್ಗೆ ಹಾಗೂ ಗೌರವಧನ ಮಂಜೂರು ಮಾಡಲು ₹೫೦೦೦ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಡಿ. ೨೨ರಂದು ಮುಖ್ಯೋಪಾಧ್ಯಾಯ ಕಳಕಪ್ಪ ಸಿದ್ದಪ್ಪ ರಾಜೂರು ₹೪ ಸಾವಿರ ಲಂಚದ ಹಣ ಪಡೆದುಕೊಳ್ಳುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಜಿಲ್ಲಾ ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕ ವಿಜಯ ಬಿರಾದಾರ ಮತ್ತು ಪೊಲೀಸ್ ನಿರೀಕ್ಷಕ ಪರಮೇಶ್ವರ ಜಿ. ಕವಟಗಿ ಹಾಗೂ ಸಿಎಚ್‌ಸಿಗಳಾದ ಎಂ.ಎಂ. ಅಯ್ಯನಗೌಡರ, ವಿ.ಎಸ್. ದೀಪಾಲಿ, ಯು.ಎನ್. ಸಂಗನಾಳ, ಮತ್ತು ಸಿಪಿಸಿಗಳಾದ ಎಚ್.ಐ. ದೇಪುರವಾಲಾ, ಎಂ.ಬಿ. ಬಾರಡ್ಡಿ, ಪಿ.ಎಲ್. ಪಿರಿಮಾಳ, ಎಪಿಸಿಗಳಾದ ಎಸ್.ವಿ. ನೈನಾಪೂರ ಹಾಗೂ ಎಂ.ಆರ್. ಹಿರೇಮಠ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಗದುಗಿನ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.