ಸಾರಾಂಶ
ಗಜೇಂದ್ರಗಡ: ತಾಲೂಕಿನ ನೆಲ್ಲೂರು ಗ್ರಾಮಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಶನಿವಾರ ಪಟ್ಟಣದ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಎಸ್.ಎಫ್.ಐ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಎಸ್‌ಎಫ್‌ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ರಾಜ್ಯ ಸರ್ಕಾರ ಶಕ್ತಿ ಯೋಜನೆ ಮಾಡಿ ಉಚಿತ ಬಸ್ ವ್ಯವಸ್ಥೆ ಘೋಷಣೆ ಮಾಡಿದೆ. ಆದರೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಂಚಾರ ನಡೆಸುತ್ತಿಲ್ಲ. ಪರಿಣಾಮ ಶಾಲಾ, ಕಾಲೇಜು ಅವಧಿಗೆ ಬರಲು ಹಾಗೂ ಮರಳಿ ಗ್ರಾಮಕ್ಕೆ ತೆರಳುವ ಗ್ರಾಮೀಣ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಡೆಗಣಿಸುತ್ತಿವೆ ಎಂದು ದೂರಿದ ಅವರು, ನೆಲ್ಲೂರ ಗ್ರಾಮದಿಂದ ಪಟ್ಟಣಕ್ಕೆ ಅಂದಾಜು ೬೦ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಆಗಮಿಸುತ್ತಾರೆ. ಆದರೆ ಅವರಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ್ದು ಒಂದೆಡೆಯಾದರೆ ಶೈಕ್ಷಣಿಕ ವರ್ಷ ಆರಂಭವಾಗಿ ಸುಮಾರು ಎರಡೂವರೆ ತಿಂಗಳು ಕಳೆದರೂ ಸಹ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ಕಲ್ಪಿಸಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಶಾಸಕರು ತಕ್ಷಣವೇ ತಾಲೂಕಿನ ನೆಲ್ಲೂರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಕಾಲೇಜು ವಿದ್ಯಾರ್ಥಿನಿ ಅನುಷಾ ಹೀರೇಮಠ ಮಾತನಾಡಿ, ನಮ್ಮ ಊರಿಗೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ. ನಾವು ದಿನನಿತ್ಯ ಸುಮಾರು ೪ ಕೀ.ಮಿ ನಡೆದುಕೊಂಡು ಕಾಲೇಜಿಗೆ ಬರಬೇಕಿದೆ. ಮಳೆಗಾಲ ಆರಂಭವಾಗಿದ್ದು ಮುಶೀಗೇರಿ ಕ್ರಾಸ್‌ನಿಂದ ನೆಲ್ಲೂರ ಗ್ರಾಮದವರೆಗೆ ಮಳೆಯಲ್ಲಿ ನೆನೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಂಬಂಧಪಟ್ಟವರು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದರು. ಅನಿಲ್ ರಾಠೋಡ, ಜ್ಯೋತಿ ಬೇಣಹಾಳ, ಸವಿತಾ ಬೇವಿನಗಿಡದ, ಲಕ್ಷ್ಮಿ ಪೂಜಾರಿ, ಪಾರವ್ವ ಹೀರೆಮಠ, ಪೂಜಾ ದೊಡ್ಡಮನಿ, ಸಂತೋಷ ಮಡಿವಾಳ, ಆನಂದ ಬೆಲ್ಲಪ್ಪನವರ, ಮಂಜುಳಾ ಬೆಳವಣಕಿ, ಕವಿತಾ ಚನ್ನಗೌಡರ, ಸಂಗಮೇಶ ಹೀರೆಮಠ, ರೇಣುಕಾ ಅಂಗಡಿ, ವಿಜಯಲಕ್ಷ್ಮಿ ಚಂಪನಗೌಡರ, ಮಹಾಂತೇಶ ಹೀರೆಮಠ, ಗಣೇಶ ಮಾಸ್ತಕಟ್ಟಿ ಸೇರಿ ಇತರರು ಇದ್ದರು.