ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಸರ್ಕಾರಿ ಶಾಲೆಗಳಿಗೆ ಉಚಿತ ಯೋಗ, ಕಂಪ್ಯೂಟರ್ ತರಬೇತಿ ನೀಡುತ್ತೇವೆ ಎಂದು ಅರ್ಜಿ ಸಲ್ಲಿಸಿದ ಅಬ್ದುಲ್ ಕಲಾಂ ಎಂಬ ನಕಲಿ ಸಂಸ್ಥೆಗೆ ಸರ್ಕಾರದ ಅನುಮತಿ ಇಲ್ಲದಿದ್ದರೂ ನಿಯಮ ಮೀರಿ ಆದೇಶ ನೀಡಿ ಲಕ್ಷಾಂತರ ರು. ಭ್ರಷ್ಟಾಚಾರಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಹಾಗೂ ಮಾಜಿ ರಾಷ್ಟ್ರಪತಿಗಳ ಹೆಸರು ದುರ್ಬಳಕೆ ಮಾಡಿದ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಶಾಸಕ ಎ.ಆರ್. ಕೃಷ್ಣಮೂರ್ತಿ ಸದನದಲ್ಲಿ ಆಗ್ರಹಿಸಿದರು. ಬೆಂಗಳೂರಿನಲ್ಲಿ ನಡೆದ ವಿಧಾನಸಭಾ ಕಲಾಪದಲ್ಲಿ ಮಾತನಾಡಿ, ಅಬ್ದುಲ್ ಕಲಾಂ ಸಂಸ್ಥೆ ಎಂಬುದೇ ಕೊಳ್ಳೇಗಾಲ ಪಟ್ಟಣದ ನಗರಸಭಾ ವ್ಯಾಪ್ತಿಯ ಶ್ರೀನಿವಾಸ ಟಾಕೀಸ್ ರಸ್ತೆಯಲ್ಲಿಲ್ಲ, ಮೂಲ ಸಂಸ್ಥೆಯವರು ಕೊಳ್ಳೇಗಾಲಕ್ಕೆ ಬಂದಿಲ್ಲ, ಹಾಗಿದ್ದರೂ ಪರಿಶೀಲಿಸದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸಂಸ್ಥೆಗೆ ಉಚಿತ ಕಂಪ್ಯೂಟರ್ ಮತ್ತು ಯೋಗ ತರಬೇತಿಗೆ ನುರಿತ ಶಿಕ್ಷಕರನ್ನು ನೇಮಿಸುವ ವಿಚಾರದಲ್ಲಿ ಸರ್ಕಾರದ ಗಮನಕ್ಕೆ ತಾರದೆ ಆದೇಶ ನೀಡಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಅಧಿಕಾರಿಗಳು ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮವಾಗಬೇಕು, ರೈತಾಪಿ ವರ್ಗದ ಮಕ್ಕಳಿಗೆ ಆದ ಅನ್ಯಾಯಕ್ಕೆ ನ್ಯಾಯ ಸಿಗಬೇಕು ಎಂದರು.ಹಣ ವಾಪಸು ಇಲ್ಲ, ಸಂಬಳವೂ ಇಲ್ಲ:
ಡಿಡಿಪಿಐ ನಿಯಮ ಮೀರಿದ ಆದೇಶದಿಂದಾಗಿ ಉದ್ಯೋಗ ಸಿಗುತ್ತೆ ಎಂದು ನಂಬಿದ ನೂರಾರು ಫಲಾನುಭವಿಗಳಿಂದ ಈ ಪ್ರಕರಣದಲ್ಲಿ ₹50 ಸಾವಿರದಿಂದ ₹1.5 ಲಕ್ಷದತನಕ ತಿಂಗಳು ಸಂಬಳ ನೀಡುವ ಆಮಿಷ ತೋರಿ ಉದ್ಯೋಗದ ಆದೇಶದ ಭರವಸೆ ನೀಡಿ ವಸೂಲಿ ಮಾಡಲಾಗಿದೆ. ಇವರಿಂದ ಆದೇಶ ಪಡೆದ ಫಲಾನುಭವಿಗಳು ಸಂಬಳವಿಲ್ಲದೆ ಪರದಾಡುವಂತಾಗಿದೆ. ಇದೊಂದು ನಕಲಿ ಸಂಸ್ಥೆ, ಈ ಸಂಸ್ಥೆ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಬೇಕು ಎಂದರು.ಕನ್ನಡಪ್ರಭ ವರದಿ ಪ್ರಸ್ತಾಪಿಸಿದ ಶಾಸಕರು:
ಸದನದಲ್ಲಿ ಕನ್ನಡಪ್ರಭ ಈ ಪ್ರಕರಣದ ಕುರಿತು ವರದಿ ಮಾಡಿದೆ ಎಂದು ಉಲ್ಲೇಖಿಸಿದ ಶಾಸಕ ಎಆರ್‌ಕೆ, ಅಧಿಕಾರಿಗಳ ನಿಯಮ ಮೀರಿದ ಆದೇಶದಿಂದಾಗಿ ರೈತಾಪಿ ವರ್ಗದ ಮಕ್ಕಳು ಉದ್ಯೋಗದ ಆಸೆಗಾಗಿ ಹಣ ನೀಡಿ ವಂಚನೆಗೊಳಗಾಗುವಂತಾಗಿದೆ. ಹಣಕ್ಕಾಗಿ ತರಬೇತಿ ಹೊಂದಿಲ್ಲದವರನ್ನು ನೇಮಿಸಿಕೊಳ್ಳಲಾಗಿದೆ. ಈ ಆದೇಶದಿಂದ ಸಾಕಷ್ಟು ಭ್ರಷ್ಟಾಚಾರದ ಜೊತೆ ಸಾಕಷ್ಟು ವಿವಾದ ಗೊಂದಲವೂ ಮೂಡಿದ್ದು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಸದನದಲ್ಲಿ ಒತ್ತಾಯಿಸಿದರು.ಏನಿದು ಪ್ರಕರಣ?:ಕಲಾಂ ಸಂಸ್ಥೆ ಉಚಿತ ಯೋಗ, ಕಂಪ್ಯೂಟರ್ ತರಬೇತಿ ನೀಡಿ ಫಲಾನುಭವಿಗಳಿಗೆ ನಮ್ಮ ಸಂಸ್ಥೆಯಿಂದ ₹10 ಸಾವಿರ ಸಂಬಳ ನೀಡುತ್ತೇವೆ, ಸರ್ಕಾರಿ ಶಾಲೆಗಳಿಗೆ ನಿಮ್ಮನ್ನು ನೇಮಿಸಿ ಕಳುಹಿಸುತ್ತೇವೆ, ನಮ್ಮ ಸಂಸ್ಥೆ ಆದೇಶ 5ವರ್ಷಗಳ ತನಕ ಇರುತ್ತೆ, ನಿಮ್ಮ ಉದ್ಯೋಗ ಕಾಯಂ ಆಗುತ್ತೆ ಎಂಬಿತ್ಯಾದಿ ಸುಳ್ಳು ಹೇಳಿ ಫಲಾನುಭವಿಗಳನ್ನು ನಂಬಿಸಿ ಲಕ್ಷಾಂತರ ರು. ಸುಲಿಗೆ ಮಾಡಲಾಗಿತ್ತು.
ಉದ್ಯೋಗದ ಆಸೆಗಾಗಿ ಲಕ್ಷಾಂತರ ರು. ನೀಡಿದ ಹಲವು ಫಲಾನುಭವಿಗಳು ವಂಚನೆಗೊಳಗಾದರೆ ಹತ್ತಾರು ಮಂದಿಗೆ ಕನ್ನಡಪ್ರಭ ವರದಿ ಪ್ರಕಟಗೊಂಡ ಬಳಿಕ ಹಣ ಹಿಂತಿರುಗಿಸಿರುವ ಸಾಕಷ್ಟು ಉದಾಹರಣೆಗಳು ದೊರೆತಿದ್ದು, 2024ರ ಜು.29ರಂದು ಈ ಸಂಸ್ಥೆ ಅನುಮತಿಗೆ ಮನವಿ ನೀಡುತ್ತಿದ್ದಂತೆ ಅದೇ ದಿನ ಡಿಡಿಪಿಐ ಷರತ್ತುಗಳೊಂದಿಗೆ ಆದೇಶ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಬಿಇಒ ಸಹಾ 2024ರ ಡಿ.12ರಂದು ಅಟೆಂಡರ್‌ಗಳನ್ನು ನೇಮಿಸಿಕೊಂಡಿದ್ದು ಬಿಡುಗಡೆಗೊಳಿಸುವಂತೆ ನಿಯಮ ಮೀರಿ ಮತ್ತೊಂದು ಆದೇಶ ಹೊರಡಿಸಿ ವಿವಾದಕ್ಕೀಗಿಡಾಗಿದ್ದನ್ನು ಕನ್ನಡಪ್ರಭ ಸುದೀರ್ಘ ವರದಿ ಪ್ರಕಟಿಸಿತ್ತು.ವ್ಯಾಪಕ ಭ್ರಷ್ಟಾಚಾರದ ಕುರಿತು ಸವಿವರವಾಗಿ ಕನ್ನಡಪ್ರಭ ಸರಣಿ ವರದಿಗಳ ಮೂಲಕ ಗಮನ ಸೆಳೆದಿತ್ತು. ಆದರೆ ಶಿಕ್ಷಣ ಇಲಾಖಾಧಿಕಾರಿಗಳು, ಜಿಲ್ಲಾಡಳಿತ ಈ ಸಂಬಂಧ ಮೌನ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದರಲ್ಲಿ ನನ್ನ ಪಾತ್ರವಿಲ್ಲಶಾಸಕರಿಗೆ ಡಿಡಿಪಿಐ ಅಳಲು
ನಾನು ಪ್ರವಾಸೋದ್ಯಮ ಅಧ್ಯಕ್ಷರೊಬ್ಬರ ಮಾತು ಕೇಳಿ ಕಲಾಂ ಸಂಸ್ಥೆಗೆ ಆದೇಶ ನೀಡಿ ತಪ್ಪು ಮಾಡಿದ್ದೇನೆ. ಇದರಲ್ಲಿ ನನ್ನ ಪಾತ್ರವಿಲ್ಲ, ಬಿಇಒ ಮತ್ತು ಮುಖ್ಯ ಶಿಕ್ಷಕರು ಈ ಪ್ರಕರಣದಲ್ಲಿ ತಪ್ಪು ಮಾಡಿದ್ದಾರೆ. ನನಗೆ ಬಡ್ತಿ ಇರುವ ಕಾರಣ ನನ್ನನ್ನು ಕಾಪಾಡಿ ಎಂದು ಕೊಳ್ಳೇಗಾಲ ಶಾಸಕ ಕೃಷ್ಣಮೂರ್ತಿಗೆ ಡಿಡಿಪಿಐ ರಾಮಚಂದ್ರರಾಜೇ ಅರಸು ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಶಾಸಕರಿಗೆ ಕರೆ ಮಾಡಿರುವ ಡಿಡಿಪಿಐ, ಜಿಪಂ ಸಿಇಒ ಮತ್ತು ನನಗೆ ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷರು ಮತ್ತು ಇನ್ನಿತರರು ನೀವು ಅನುಮತಿ ನೀಡಿ ಎಂದು ಒತ್ತಾಯಿಸಿದರು. ಹಾಗಾಗಿ ನೀಡಿದೆ. ಬೇಕಿದ್ದರೆ ಜಿಪಂ ಸಿಇಒ ಕೇಳಿ ಎಂದು ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.ನಿಮ್ಮ ರಕ್ಷಣೆ ಕಷ್ಟಸಾಧ್ಯ: ಶಾಸಕ ಎಆರ್‌ಕೆ
ಹಿರಿಯ ಅಧಿಕಾರಿಯಾದ ತಾವು ಸರ್ಕಾರದ ಅನುಮತಿ ಇಲ್ಲದೆ ಕಲಾಂ ಸಂಸ್ಥೆಗೆ ಅನುಮತಿ ನೀಡಿದ್ದು ತಪ್ಪು, ಪ್ರವಾಸೋದ್ಯಮದವರು ಈಗ ನಿಮ್ಮ ರಕ್ಷಣೆಗೆ ಬರುತ್ತಾರಾ? ಇಷ್ಟೆಲ್ಲ ಕನ್ನಡಪ್ರಭ ಪತ್ರಿಕೆಗಳಲ್ಲಿ ವರದಿಯಾಗುತ್ತಿದ್ದರೂ ನೀವು ನಕಲಿ ಸಂಸ್ಥೆಗೆ ನೀಡಿದ ಆದೇಶ ಏಕೆ ರದ್ದು ಮಾಡಲಿಲ್ಲ, ಹೋಗಲಿ ಅವರ ಮೇಲೆ ದೂರು ನೀಡಿದ್ದೀರಾ? ಎಂದು ಪ್ರಶ್ನಿಸಿ, ಸರ್ಕಾರದ ಹಂತದಲ್ಲಿ ಈ ಪ್ರಕರಣ ಇದ್ದು ಈ ಸಂದರ್ಭದಲ್ಲಿ ನಿಮಗೆ ಬಡ್ತಿ ಇದ್ದರೂ ರಕ್ಷಣೆ ಕಷ್ಟ ಸಾಧ್ಯ ಎಂದಿದ್ದಾರೆ.ಬಿಇಒ ಅನುಮತಿ ಮೇರೆಗೆ ನೇಮಕ,
ಮುಖ್ಯ ಶಿಕ್ಷಕರಿಂದ ಪತ್ರ ಬಹಿರಂಗಅಬ್ದುಲ್ ಕಲಾಂ ಸಂಸ್ಥೆಗೆ ನಿಯಮ ಮೀರಿ ಸರ್ಕಾರದ ಆದೇಶವಿಲ್ಲದಿದ್ದರೂ ಸಹ ಅಟೆಂಡರ್‌ಗಳನ್ನು ನೇಮಿಸಿಕೊಂಡ ವಿವಾದದ ಬೆನ್ನಲ್ಲೆ ಕೆಲವು ಮುಖ್ಯ ಶಿಕ್ಷಕರು ಹನೂರು ಬಿಇಒ ಅನುಮತಿ ಮೇರೆಗೆ ಅಟೆಂಡರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಬಿಇಒ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಬರೆದಿರುವ ಪತ್ರಗಳು ಬಹಿರಂಗಗೊಂಡಿವೆ. ಈ ಪ್ರಕರಣದಲ್ಲಿ ಅಟೆಂಡರ್‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಎಂದು ಹನೂರು ಬಿಇಒ ಡಿಸೆಂಬರ್ 2024ರಲ್ಲಿ ಆದೇಶ ಹೊರಡಿಸಿದ ಬೆನ್ನಲ್ಲೆ ಕೆಲವು ಮುಖ್ಯ ಶಿಕ್ಷಕರು ನಿಮ್ಮ ಅನುಮತಿ ಮೇರೆಗೆ ನಾವು ಅಟೆಂಡರ್‌ಗಳನ್ನು ನೇಮಿಸಿಕೊಂಡಿದ್ದು ಪುನಃ ನಿಮ್ಮ ಲಿಖಿತ ದಾಖಲೆ ಮೇರೆಗೆ ಕಲಾಂ ಸಂಸ್ಥೆಗೆ ನೇಮಿಸಿದ ಅಟೆಂಡರ್‌ಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯ ಶಿಕ್ಷಕರು ಬರೆದಿರುವ ಹಲವಾರು ಪತ್ರ ವೈರಲ್ ಆಗಿದೆ.
ತಪ್ಪಿತಸ್ಥರ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪಈ ಪ್ರಕರಣದಲ್ಲಿ ಈಗಾಗಲೇ ತನಿಖೆ ನಡೆಸಲಾಗುತ್ತಿದೆ, ಯಾರೇ ಭಾಗಿಯಾಗಿದ್ದರೂ ಸಹ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಶಾಸಕ ಕೃಷ್ಣಮೂರ್ತಿ ಸದನದಲ್ಲಿ ಪ್ರಶ್ನಿಸಿದ ಕುರಿತಂತೆ ಉತ್ತರಿಸಿದ ಸಚಿವರು ಮೇಲ್ನೋಟಕ್ಕೆ ಇಲ್ಲಿ ಭ್ರಷ್ಟಾಚಾರ ನಡೆದಿದೆ, ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಸರ್ಕಾರದ ಗಮನಕ್ಕೆ ಈ ವಿಚಾರ ಬಂದಿದ್ದು ಶೀಘ್ರ ವಿಚಾರಣೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ವಹಿಸಲಾಗುವುದು, ಸಂಸ್ಥೆ ವಿರುದ್ಧವೂ ಕ್ರಮಕ್ಕೆ ಸೂಚಿಸಲಾಗುವುದು ಎಂದರು.