ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಿಲ್ಲೆಯ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳ ಕೆಲಸದ ಸಮಯ ಬದಲಾವಣೆ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಾವೇರಿ: ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಜಿಲ್ಲೆಯ ಸರ್ಕಾರಿ ಕಚೇರಿಗಳು ಹಾಗೂ ಶಾಲಾ ಕಾಲೇಜುಗಳ ಕೆಲಸದ ಸಮಯ ಬದಲಾವಣೆ ಮಾಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಬೇಸಿಗೆಯ ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವ ಕಾರಣ ಉತ್ತರ ಕರ್ನಾಟಕದ ಕಲಬುರಗಿ ವಿಭಾಗ ಹಾಗೂ ಬೆಳಗಾವಿ ವಿಭಾಗದ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನೆಗೋಷಿಯೇಬಲ್ ಇನಸ್ಟ್ರುಮೆಂಟ್ ಆ್ಯಕ್ಟ್ ಅಡಿಯಲ್ಲಿ ಕಚೇರಿ ಸಮಯವನ್ನು ಬೆಳಗ್ಗೆ 10 ರಿಂದ ಸಂಜೆ 5.30ರ ಬದಲಾಗಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರ ವರೆಗೆ ಬದಲಾವಣೆ ಮಾಡಿ ಪ್ರತಿವರ್ಷ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗುತ್ತಿದೆ. ಉತ್ತರ ಕರ್ನಾಟಕದ ಬೆಳಗಾವಿ ವಿಭಾಗದ ಹಾವೇರಿ ಜಿಲ್ಲೆಯಲ್ಲೂ ಬಿಸಿಲಿನ ತಾಪ 37ರಿಂದ 42 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಸಾರ್ವಜನಿಕರು ಮಧ್ಯಾಹ್ನದ ಅವಧಿಯಲ್ಲಿ ಕಚೇರಿಗಳಿಗೆ ಬರಲು, ಹೋಗಲು ಮತ್ತು ಸರ್ಕಾರಿ ನೌಕರರು ಮಧ್ಯಾಹ್ನದ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ. ಸಾರ್ವಜನಿಕರು, ವಯೋವೃದ್ಧರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗಳಿಗೆ ಮಧ್ಯಾಹ್ನದ ಅವಧಿಯಲ್ಲಿ ಭೇಟಿ ನೀಡುವುದು ಬಹಳ ತೊಂದರೆಯಾಗುತ್ತಿದೆ ಎಂದರು. ರಕ್ತದೊತ್ತಡ, ಮಧುಮೇಹ ಇರುವ ಹಲವಾರು ಸಾರ್ವಜನಿಕರು, ಸರ್ಕಾರಿ ನೌಕರರು ಹಾಗೂ ಮಹಿಳಾ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿ ವರ್ಷ ಕಲಬುರಗಿ ವಿಭಾಗದಂತೆ ಹಾವೇರಿ ಜಿಲ್ಲೆಯಲ್ಲೆಯೂ ಸಹ ಏ.1ರಿಂದ ಮೇ 31ರ ವರೆಗೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ಕಚೇರಿ, ಶಾಲಾ ಕಾಲೇಜುಗಳ ಕರ್ತವ್ಯದ ಸಮಯವನ್ನು ಬೆಳಗ್ಗೆ 8ರಿಂದ ಮಧ್ಯಾಹ್ನ 1.30ಕ್ಕೆ ಬದಲಾವಣೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ವೇಳೆ ಸಂಘದ ರಾಜ್ಯ ಸಮಿತಿ ಸದಸ್ಯ ಮುನೀಶ್ವರ ಚೂರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಪಾಟೀಲ, ಖಜಾನೆ ಇಲಾಖೆ ನಿರ್ದೇಶಕ ಸುರೇಶ ಜಿ., ಆರ್‌ಟಿಒ ಇಲಾಖೆಯ ಶ್ರೀಪಾದ ಬ್ಯಾಳಿ, ಸಂಘದ ಖಜಾಂಚಿ ದಾವಲಸಾಬ ಕಮಗಾಲ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಜರಿದ್ದರು.