ಸಾರಾಂಶ
ಚೌತನಿ ಹೊಳೆಯಲ್ಲಿ ಮೆರವಣಿಗೆಯಲ್ಲಿ ಒಯ್ದು ವಿಸರ್ಜನೆ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಭಟ್ಕಳ; ಪಟ್ಟಣದ ಚೌತನಿ ಹೊಳೆಯಲ್ಲಿ ಹಲವು ವರ್ಷಗಳಿಂದ ಗಣೇಶ ಮೂರ್ತಿ ವಿಸರ್ಜನೆ ಮಾಡುತ್ತಿದ್ದು, ಗಣೇಶಮೂರ್ತಿಗೆ ವಿಸರ್ಜನೆಗೆ ಅನುಕೂಲವಾಗಲು ಹೊಳೆಯ ಸುತ್ತಮುತ್ತ ಬೆಳೆದಿರುವ ಗಿಡಗಂಟೆಗಳು, ಎಸೆಯಲಾದ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಆಗ್ರಹಿಸಲಾಗಿದೆ.
ಪಟ್ಟಣದಲ್ಲಿ ಸಾರ್ವಜನಿಕವಾಗಿ ಪ್ರತಿಸ್ಥಾಪಿಸಲಾದ ಮತ್ತು ಕೆಲವು ಮನೆಗಳಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಗಳನ್ನು ಇದೇ ಚೌತನಿ ಹೊಳೆಯಲ್ಲಿ ಮೆರವಣಿಗೆಯಲ್ಲಿ ಒಯ್ದು ವಿಸರ್ಜನೆ ಮಾಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಚೌತನಿ ಹೊಳೆಯ ಸುತ್ತಮುತ್ತ, ಹೊಳೆಗೆ ಹೋಗುವ ದಾರಿಯಲ್ಲಿ ಗಿಡಗಂಟೆಗಳು ವ್ಯಾಪಕವಾಗಿ ಬೆಳೆದಿದೆ. ಮತ್ತು ಇಲ್ಲಿ ಮದ್ಯದ ಬಾಟಲಿಗಳು, ತ್ಯಾಜ್ಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿದೆ. ಇದನ್ನು ಸ್ವಚ್ಛ ಮಾಡಿದರೆ ಗಣೇಶ ವಿಸರ್ಜನೆಗೆ ಅನುಕೂಲವಾಗಲಿದೆ. ಹೊಳೆಗೆ ಹೋಗುವ ದಾರಿಯಲ್ಲಿ ವಾಹನಗಳು ಸುಗಮವಾಗಿ ಹೋಗಲು ಅನುಕೂಲ ಮಾಡಿಕೊಡಬೇಕಿದೆ. ಅದರಂತೆ ಗಣೇಶ ವಿಸರ್ಜನೆಯನ್ನು ವೀಕ್ಷಿಸಲು ಇಲ್ಲಿ ಸಾವಿರಾರರು ಜನರು ಸೇರುವುದರಿಂದ ಲೈಟಿಂಗ್ ವ್ಯವಸ್ಥೆ ಮಾಡಬೇಕೆಂಬ ಆಗ್ರಹವೂ ಕೇಳಿ ಬಂದಿದೆ. ಕಳೆದ ಹಲವು ವರ್ಷಗಳಿಂದ ಚೌತನಿ ಹೊಳೆ ಸುತ್ತಮುತ್ತಲಿನ ಗಿಡಗಂಟೆಗಳನ್ನು ಸ್ವಚ್ಛ ಮಾಡಿಲ್ಲ. ಈ ವರ್ಷವಾದರೂ ಸಂಬಂಧಪಟ್ಟವರು ಇಲ್ಲಿ ಸ್ವಚ್ಛ ಮಾಡಿಕೊಟ್ಟರೆ ಗಣೇಶ ವಿಸರ್ಜನೆಗೆ ಅನುಕೂಲವಾಗಲಿದೆ. ಈ ಬಗ್ಗೆ ತಾಲೂಕು ಆಡಳಿತ ಮತ್ತು ಪುರಸಭೆ ತುರ್ತು ಗಮನಹರಿಸಬೇಕಿದೆ.ಈ ಸಲ ಚೌತನಿ ಹೊಳೆ ಸುತ್ತಮುತ್ತಲಿನ ಗಿಡಗಂಟೆಗಳನ್ನು ಮತ್ತು ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಲೈಟಿಂಗ್ ವ್ಯವಸ್ಥೆ ಮಾಡಿ ಗಣೇಶ ವಿಸರ್ಜನೆಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಹನುಮಾನ ನಗರ ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ನಾಯ್ಕ.