ಸೇಂಗಾ, ತೊಗರಿ ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

| Published : Jan 02 2025, 12:32 AM IST

ಸಾರಾಂಶ

ಹವಾಮಾನ ವೈಪರಿತ್ಯದಿಂದಾಗಿ ಚಳ್ಳಕೆರೆ ತಾಲೂಕಿನಲ್ಲಿ ಹಾನಿಯಾಗಿರುವ ಸೇಂಗಾ, ತೊಗರಿ ಬೆಳೆಗೆ ವಿಮೆ ನೀಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹವಾಮಾನ ವೈಪರೀತ್ಯದಿಂದಾಗಿ ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ, ತೊಗರಿ ಬೆಳೆ ಕುಂಠಿತವಾಗಿದ್ದು ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಸೇಂಗಾ, ತೊಗರಿ ಬೆಳೆಗಾರರ ಸಂಘದಿಂದ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಚಳ್ಳಕೆರೆ ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಮಳೆಯಾಶ್ರಿತ ಎಲ್ಲ ಬೆಳೆಗಳು ಹವಾಮಾನ ವೈಪರೀತ್ಯದಿಂದ ಕುಂಠಿತವಾಗಿವೆ. ಮುಂಗಾರು ಮಳೆ ಸಕಾಲಕ್ಕೆ ಬಂದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದರು. ತಿಂಗಳೊಪ್ಪತ್ತಾದರೂ ಮಳೆ ಸುರಿಯದೆ, ಬೆಳೆ ಒಣಗುವ ದುಸ್ಥಿತಿಗೆ ಸಿಲುಕಿ, ರೈತರು ಆತಂಕಕ್ಕೆ ಒಳಗಾಗಿದ್ದರು. ಸುರಿದ ಮಳೆಯಿಂದ ಬೆಳೆ ಕಾಯಿ ಕಟ್ಟುವ ಶೀತ ಜಾಸ್ತಿಯಾಯಿತು. ನಂತರ ಹತ್ತಾರು ದಿನಗಳು ಚಂಡಮಾರುತ ಮಳೆ ಧಾರಾಕಾರವಾಗಿ ಸುರಿಯಿತು. ಇದರ ಪರಿಣಾಮವಾಗಿ ನೆಲ ಬಿಗಿತವಿಲ್ಲದ್ದರಿಂದ ನೀರ್ಗಾಯಿಗಳು ಅಧಿಕವಾಗಿ ಕಾಯಿ ಕಟ್ಟಲು ಸಾಧ್ಯವಾಗಲಿಲ್ಲ.

ಶೇಂಗಾ ಗಿಡ ಅಬ್ಬರವಾಗಿ ಬೆಳೆದರೂ ಎರಡನೇ ಸುತ್ತಿನ ಚಂಡಮಾರುತದ ಅಧಿಕ ಮಳೆಯಿಂದ ಮಿತಿ ಮೀರಿದ ಬುಡ ಕೊಳೆವ ರೋಗಕ್ಕೆ ಶೇಂಗಾ ಗಿಡಗಳು ಬಲಿಯಾಗಿದ್ದರಿಂದ ಬೆಳೆಗೆ ಹೊಡೆತ ಬಿತ್ತು. ಅಳಿದುಳಿದ ಶೇಂಗಾ ಬೆಳೆ ಕಟಾವು ಮಾಡುವ ಸಂದರ್ಭದಲ್ಲೂ ಬಂದ ಅನಿರೀಕ್ಷಿತ ಮಳೆಯಿಂದಾಗಿ ಬಳ್ಳಿ ಮತ್ತು ಶೇಂಗಾಕಾಯಿಗೂ ಸಂಚಕಾರ ಬಂತು. ಸಕಾಲಕ್ಕೆ ಮಳೆ ಬಾರದೆ. ಅಕಾಲಿಕವಾಗಿ ಎರಡು ಬಾರಿ ದೀರ್ಘಕಾಲ ಸುರಿದ ಮಳೆಯಿಂದ ಹಾಗೂ ಹವಾಮಾನ ವೈಪರೀತ್ಯದಿಂದ ಶೇಂಗಾ ಬೆಳೆಗೆ ತೀವ್ರ ಹಾನಿಯಾಯಿತೆಂದು ರೈತರು ನೋವು ತೋಡಿಕೊಂಡರು.

ಚಳ್ಳಕೆರೆ ತಾಲೂಕಿನಲ್ಲಿ ಈ ಬಾರಿ ಕೃಷಿ ಇಲಾಖೆಯ ಉತ್ತೇಜನದಿಂದ ಮತ್ತು ಪ್ರೋತ್ಸಾಹ ಧನ ಸಹಾಯ ಬರುವ ಪ್ರೇರಣೆಯಿಂದ ವಿಪುಲವಾಗಿ ಸಿರಿಧಾನ್ಯ ಸಾವೆಯನ್ನು ಬಿತ್ತನೆ ಮಾಡಿದ್ದರು. ಸುಮಾರು 50 ದಿನಗಳು ಮಳೆ ಬಾರದೆ ಬೆಳೆ ನಲುಗಿದರೂ, ನಂತರದ ಮಳೆಯಿಂದ ಸಾವೆ ಬೆಳೆಯಿತು. ಬಂದ ಬೆಳೆಗೆ ಬೆಲೆಯಿಲ್ಲದೆ ರೈತರ ಕೈ ಸುಟ್ಟು ಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರೋತ್ಸಾಹ ಹಣ ಸಕಾಲಕ್ಕೆ ಬರುವಂತೆ ಅಧಿಕಾರಿಗಳು ಗಮನಹರಿಸಿ ರೈತರಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ರೈತರಿಗೆ ಕಟಾವು ಸಮೀಕ್ಷೆಯ ಮಾಹಿತಿಯನ್ನು ನೀಡದೆ ರೈತರನ್ನು ನಿರ್ಲಕ್ಷ್ಯ ಮಾಡಿದ್ದು ಬೆಳೆ ಹಾನಿಯ ಅರ್ಹತೆಯನ್ನು ಪರಿಗಣಿಸಿ ವಿಮೆ ನೀಡುವಂತೆ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಚಳ್ಳಕೆರೆ ತಾಲೂಕು ಕಸಬಾ ಹೋಬಳಿ ಸೇಂಗಾ, ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಶಿವಲಿಂಗಪ್ಪ, ಕಾರ್ಯದರ್ಶಿಆರ್.ದಯಾನಂದಮೂರ್ತಿ, ಭರತೇಶರೆಡ್ಡಿ, ಬಿ.ಪಿ.ತಮ್ಮೇಗೌಡ, ಶಶಿಧರ ಉಪಸ್ಥಿತರಿದ್ದರು.