ರಾಣಿಬೆನ್ನೂರು: ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಗುರುವಾರ ಸುರಿದ ಆಲಿಕಲ್ಲು ಮಳೆಯಿಂದ ಸುಮಾರು ಎರಡು ಸಾವಿರ ಎಕರೆ ಜಮೀನಿನಲ್ಲಿ ಭತ್ತದ ಫಸಲು ಹಾನಿಯಾಗಿದ್ದು, ಸರ್ಕಾರ ಪ್ರತಿ ಎಕರೆಗೆ ₹40 ಸಾವಿರ ಹಾಗೂ ಅಡಕೆಗೆ ₹1 ಲಕ್ಷ ಪರಿಹಾರ ನೀಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಆಗ್ರಹಿಸಿದರು.
ಹಾನಿಗೊಳಗಾದ ಪ್ರದೇಶಕ್ಕೆ ಶನಿವಾರ ಸಹಾಯಕ ಕೃಷಿ ನಿರ್ದೇಶಕರ ಜತೆಗೂಡಿ ಭೇಟಿ ನೀಡಿ ಅವರು ಮಾತನಾಡಿದರು. ಮಳೆಯಿಂದ ರೈತರು ಸಾಕಷ್ಟು ಸಂಕಷ್ಟು ಎದುರಿಸುವಂತಾಗಿದೆ. ಆದ್ದರಿಂದ ಸರ್ಕಾರ ಇಂದಿನಿಂದ 12 ದಿನಗಳ ಒಳಗಾಗಿ ರೈತರಿಗೆ ಪರಿಹಾರ ವಿತರಣೆಗೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದರೆ 13ನೇ ದಿನ ಹಿರೇಬಿದರಿ ಗ್ರಾಮದಿಂದ ಸಂಕಷ್ಟ ರೈತರೊಂದಿಗೆ ರಾಣಿಬೆನ್ನೂರು ನಗರದ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ವರೆಗೆ ಪಾದಯಾತ್ರೆ ಕೈಗೊಂಡು ದೇವಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ತೆರಳಿ ಸರ್ಕಾರದ ತಿಥಿ ಕಾರ್ಯ ನೆರವೇರಿಸುತ್ತೇವೆ. ಇದರ ಅಂಗವಾಗಿ ಎಲ್ಲರಿಗೂ ತಿಥಿ ವಡೆ ವಿತರಿಸಲಾಗುವುದು ಎಂದರು.ಸಿದ್ದನಗೌಡ ಪಾಟೀಲ, ರಾಮಣ್ಣ ಹೊನ್ನಾಳಿ, ಸೋಮಶೇಖರ ಹಲಗೇರಿ, ಹನುಮಂತಪ್ಪ ಚಂದಾಪುರ, ನಾಗನಗೌಡ ಕೂನಬೇವು, ವಿರೂಪಾಕ್ಷಪ್ಪ ಮಳವಳ್ಳಿ, ಉಮೇಶ ಮಳವಳ್ಳಿ, ತಿಪ್ಪೇಶ ಮಗನವರ, ಉಮೇಶ ಚಿಕ್ಕಲವರ, ವಿಶ್ವನಾಥ ಚನ್ನಪ್ಪನವರ, ಬಸವರಾಜ ಕುರುವತ್ತಿ, ಬಸವರಾಜ ಹರ್ಕನಾಳ, ದಿಳ್ಳೆಪ್ಪ ಕಂಬಳಿ, ಗುಡ್ಡಪ್ಪ ಕಂಬಳಿ, ಸುಭಾಷ್ ಮೆಡ್ಲೇರಿ, ಚಂದ್ರಪ್ಪ ಚಂದಾಪುರ ಮತ್ತಿತರರಿದ್ದರು.
ಸರ್ಕಾರಕ್ಕೆ ವರದಿ: ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿನ ಭತ್ತದ ಫಸಲು ಹಾನಿಯಾಗಿದೆ. ಭಾನುವಾರದಿಂದಲೇ (ಮೇ 17) ಇಲಾಖೆ ಸಿಬ್ಬಂದಿ ಮೂಲಕ ಹಾನಿಯ ಸರ್ವೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಣಿಬೆನ್ನೂರು ಸಹಾಯಕ ಕೃಷಿ ನಿರ್ದೇಶಕ ಶಾಂತಮಣಿ ಜಿ. ಹೇಳಿದರು.ಮಳೆ ಹಾನಿಯ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಒತ್ತಾಯ
ರಾಣಿಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಗುರುವಾರ ಸುರಿದ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳಿಗೆ ಶನಿವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಮಳೆಯಿಂದಾಗಿ ಗ್ರಾಮದ ರೈತರು ಸಾಕಷ್ಟು ಹಾನಿಗೊಳಗಾಗಿದ್ದಾರೆ. ಆದ್ದರಿಂದ ತಾಲೂಕಿನ ಕೃಷಿ ಹಾಗೂ ಕಂದಾಯ ಅಧಿಕಾರಿಗಳು ಹಾನಿಯ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತಹಸೀಲ್ದಾರ್ ಎಚ್.ಆರ್. ಭಾಗವಾನ, ಗ್ರಾಮ ಲೆಕ್ಕಾಧಿಕಾರಿ ರುದ್ರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ನಿಂಗಪ್ಪ ಸತ್ಯಪ್ಪನವರ, ನಗರ ಘಟಕದ ಅಧ್ಯಕ್ಷ ಲಿಂಗರಾಜ ಹೊನ್ನಾಳಿ, ಚನ್ನವೀರಪ್ಪ ಬಡಿಗೇರ, ಶಿವು ಕಡೂರ, ಶಿವಪ್ಪ ಚಂದಾಪುರ, ಮಹೇಶ ಚಳಗೇರಿ, ನಾಗರಾಜ ಕುಮರಿ, ಉಮೇಶ ಚಿಕ್ಕಾಳವರ, ಉಮೇಶ ಮಳವಳ್ಳಿ, ವಿರೂಪಾಕ್ಷಪ್ಪ ಮಳವಳ್ಳಿ, ದಾನಪ್ಪ ಮಳವಳ್ಳಿ, ಕರಿಯಪ್ಪ ಚಂದಾಪುರ, ನೀಲಪ್ಪ ಚಂದಾಪುರ, ಚೇತನ ಸಂಗಾನವರ, ಮಲ್ಲಿಕಾರ್ಜುನ ಸಾವಕ್ಕಳವರ, ಪ್ರವೀಣ ಚಿಕ್ಕಳವರ ಮತ್ತಿತರರಿದ್ದರು.