ಸಾರಾಂಶ
ಹಿರೇಪಡಸಲಗಿ ಗ್ರಾಮದ ಹಟ್ಟಿ ತೋಟದ ವಸ್ತಿಯಿಂದ ಅಡಿಹುಡಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಕಿರು ಸೇತುವೆಯ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಅರ್ಧಕ್ಕೆ ನಿಂತು ಹೋಗಿದೆ. ಕೂಡಲೇ ಅದನ್ನು ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಹಿರೇಪಡಸಲಗಿ ಗ್ರಾಮದ ಹಟ್ಟಿ ತೋಟದ ವಸ್ತಿಯಿಂದ ಅಡಿಹುಡಿಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದಲ್ಲಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಕಿರು ಸೇತುವೆಯ ಕಾಮಗಾರಿ ಕಳೆದ ಎರಡು ವರ್ಷಗಳಿಂದ ಅರ್ಧಕ್ಕೆ ನಿಂತು ಹೋಗಿದೆ. ಕೂಡಲೇ ಅದನ್ನು ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಅಡಿಹುಡಿ ಗ್ರಾಪಂ ಪಿಡಿಒ ಉಮೇಶ ಸಾವಳಗಿ ಈ ಕಾಮಗಾರಿ ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದೆ. ಆರ್‌ಟಿಐ ಕಾರ್ಯಕರ್ತರೊಬ್ಬರು ಕಾಮಗಾರಿ ಕಳಪೆಯಾಗಿದೆ ಎಂದು ದೂರು ನೀಡಿದ್ದರಿಂದ ಕಾಮಗಾರಿಯು ಅರ್ಧಕ್ಕೆ ನಿಂತಿದೆ ಎಂದು ತಿಳಿಸಿದ್ದಾರೆ. ಈ ಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಸಂಗಮೇಶ್ವರ ದೇವಸ್ಥಾನವಿದೆ ಹಲವು ರೈತರ ತೋಟದ ಮನೆಗಳಿದ್ದು ನಿತ್ಯ ಸಂಚರಿಸುವ ಪ್ರಮುಖ ರಸ್ತೆಯಾಗಿದೆ. ಮಳೆಗಾಲದಲ್ಲಿ ಹಳ್ಳಕ್ಕೆ ನೀರು ಬಂದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಗ್ರಾಪಂ ಸದಸ್ಯ ಚೌಹಾಣ ಮತ್ತು ಸುತ್ತಲಿನ ಹಿರಿಯರು ಸೇರಿ ತಮ್ಮ ಸ್ವಂತ ಕರ್ಚಿನಲ್ಲಿ ಮಣ್ಣು ಹಾಕಿಸಿಕೊಂಡು ತಾತ್ಕಾಲಿಕ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ. ಆದರೂ ಹಳ್ಳಕ್ಕೆ ನೀರು ಹರಿದು ಬಂದರೆ, ಹಾಕಿದ ಮಣ್ಣು ಕೊಚ್ಚಿ ಹೋಗುವ ಸಾಧ್ಯತೆಯಿದೆ ಮತ್ತು ರಸ್ತೆ ಬಂದ್ ಆಗಿ ಸಂಪರ್ಕ ಕಡಿತವಾಗುತ್ತದೆ. ಆದ್ದರಿಂದ ಜಿಪಂ ಅಧಿಕಾರಿಗಳು ಅರ್ಧಕ್ಕೆ ನಿಂತಿರುವ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.