ಸಾರಾಂಶ
ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಕ್ಷದ ಹಿರಿಯ ಮುಖಂಡ ಅಯಾಜ್‌ಖಾನ್ ಅವರಿಗೆ ನೀಡಬೇಕೆಂದು ಬೆಂಬಲಿಗರು ಆಗ್ರಹಿಸಿದರು.
ಬೀದರ್: ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಪಕ್ಷದ ಹಿರಿಯ ಮುಖಂಡ ಅಯಾಜ್‌ಖಾನ್ ಅವರಿಗೆ ನೀಡಬೇಕೆಂದು ಬೀದರ್ ಜಿಲ್ಲಾ ಕುಲ್-ಜಮಾತ್ ಅಧ್ಯಕ್ಷ ಮುಫ್ತಿ ಅಬ್ದುಲ್ ಗಫಾರ್ ಆಗ್ರಹಿಸಿದ್ದಾರೆ.
ನಗರದ ಉರ್ದು ಹಾಲ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೀಘ್ರದಲ್ಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಅಲ್ಪಸಂಖ್ಯಾತರಿಗೆ ಬೀದರ್ ಕ್ಷೇತ್ರದ ಟಿಕೆಟ್ ಕೊಡುವಂತೆ ಬೇಡಿಕೆ ಮಂಡಿಸಲಾಗುವುದು ಎಂದು ತಿಳಿಸಿದರು.ಅಯಾಜ್ ಖಾನ್ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಬೀದರ್, ಕಲಬುರಗಿ, ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದಾರೆ. ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದಾರೆ. ಅವರಿಗೆ ಟಿಕೆಟ್ ನೀಡಿದರೆ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.
ಸ್ವಾತಂತ್ರದ ನಂತರ ಮೊದಲ ಚುನಾವಣೆಯಲ್ಲಿ ಮಾತ್ರ ಬೀದರ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಲ್ಪಸಂಖ್ಯಾತರಿಗೆ ಕೊಡಲಾಗಿತ್ತು. ಆಗ ಉತ್ತರ ಪ್ರದೇಶದ ಶೌಕತ್ ಅಲಿ ಅನ್ಸಾರಿ ಆಯ್ಕೆಯಾಗಿದ್ದರು. ನಂತರ ಈವರೆಗೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲ ಎಂದು ತಿಳಿಸಿದರು.ಅಲ್ಪಸಂಖ್ಯಾತರು ನಿರಂತರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪಕ್ಷದ ಟಿಕೆಟ್ ಕೇಳುವುದು ನಮ್ಮ ಹಕ್ಕಾಗಿದೆ. ಅಯಾಜ್‌ಖಾನ್, ಅಬ್ದುಲ್ ಮನ್ನಾನ್ ಸೇಠ್, ಡಾ.ಮಕ್ಸೂದ್ ಚಂದಾ ಇವರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಸಂತಸ ಎಂದು ಜಮೀಯತ್ ಉಲ್ಮಾ ಜಿಲ್ಲಾಧ್ಯಕ್ಷ ಅಬ್ದುಲ್‌ಗಣಿ ಹೇಳಿದರು.
ಮುಖಂಡರಾದ ಉಮರ್ ಖುರೇಶಿ, ಎಹತೆ ಶಾಮ್‌ಉಲ್ ಹಕ್, ಅಲ್ಲಾಬಕ್ಷ, ಇಫ್ತೆಕಾರ್ ಹುಸೇನ್, ಸಗೀರ್, ರಫಿಕ್ ಹಾಗೂ ಮನ್ಸೂರ್ ಅಹಮ್ಮದ್ ಖಾದ್ರಿ ಇದ್ದರು.