Students and parents expressed strong dissatisfaction over the lack of a suitable auditorium to host student gatherings, cultural programs, and other events at this government educational institution, where over three thousand students are enrolled.

ಕನ್ನಡಪ್ರಭ ವಾರ್ತೆ ಆನವಟ್ಟಿ

ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಇತರೆ ಸಮಾರಂಭಗಳನ್ನು ನಡೆಸಲು ಸೂಕ್ತ ರಂಗಮಂದಿರದ ಕೊರತೆ ಇರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು ಆರು ಸಾವಿರ ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುವಂತೆ ಪೋಷಕರು ಮನವಿ ಮಾಡಿದರು. ಪಟ್ಟಣದ ಕೆಪಿಎಸ್‌ ಪ್ರೌಢಶಾಲಾ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ 45 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಮತ್ತು ವರ್ಗಾವಣೆಗೊಂಡ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಶುಕ್ರವಾರ ಆಯೋಜಿಸಿತ್ತು. ಸಮಾರಂಭ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮಳೆ ಸುರಿದ ಪರಿಣಾಮ ಶಾಮಿಯಾನದಿಂದ ನೀರು ಸೋರಿದರೂ ಪೋಷಕರು ಸ್ಥಳ ತೊರೆಯದೆ ಛತ್ರಿ ಹಿಡಿದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ ಶುಂಠಿ ಮಾತನಾಡಿ, ಈ ಹಿಂದೆ ಶಿಕ್ಷಣ ಸಚಿವರಾಗಿದ್ದ ಎಸ್‌. ಮಧು ಬಂಗಾರಪ್ಪ ಅವರು ರಂಗಮಂದಿರ ನಿರ್ಮಾಣಕ್ಕೆ 50 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಆದರೆ ಕಾರಣಾಂತರಗಳಿಂದ ಕಾಮಗಾರಿ ಆರಂಭವಾಗಿಲ್ಲ. ಈಗ ಮತ್ತೆ ಸಚಿವರಾಗಿದ್ದು ಅವರ ಗಮನಕ್ಕೆ ತಂದು ಶೀಘ್ರದಲ್ಲೇ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಲಾಗುವುದು. ಎಲ್‌ಕೆಜಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಧು ಬಂಗಾರಪ್ಪ ಅವರು ಮಂಜೂರು ಮಾಡಿದ್ದ 26 ಕೊಠಡಿಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇನ್ನಷ್ಟು ಕೊಠಡಿಗಳಿಗಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿಯಲ್ಲಿ ಸತ್ಯದೀಪ್‌ ರೆಡ್ಡಿ (612), ಕೀರ್ತಿ (612) ಹಾಗೂ ಯು.ಕೆ. ರಕ್ಷಾ (605) ಸೇರಿದಂತೆ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ನಿವೃತ್ತ ಶಿಕ್ಷಕರಾದ ಯಶವಂತಪ್ಪ, ಗೋವಿಂದಪ್ಪ, ರವಿಜ್ಯೋತಣ್ಣನವರ್ ಹಾಗೂ ವರ್ಗಾವಣೆಗೊಂಡ ಶಿಕ್ಷಕಿಯರಾದ ರೇಷ್ಮ ಕಿಣಿ ಮತ್ತು ಗಂಗಮ್ಮ ಅವರನ್ನು ಸನ್ಮಾನಿಸಲಾಯಿತು.ಶಿಕ್ಷಣದ ಮಹತ್ವ ಕುರಿತು ಉಪನ್ಯಾಸಕ ಡಾ. ಎಚ್‌.ಟಿ. ಕರಬಸಪ್ಪ ವಿಶೇಷ ಉಪನ್ಯಾಸ ನೀಡಿದರು.ಉಪ ಪ್ರಾಂಶುಪಾಲ ಎಂ. ಮಹಾದೇವಪ್ಪ, ಸಿಡಿಸಿ ಸದಸ್ಯರಾದ ಸುರೇಶ್‌ ಕುಬಟೂರು, ಖಾದಿ ನಾಗರಾಜ್‌, ನಾಸೀರ್‌ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

---------------------

7ಎಎನ್‌ಟಿ1ಇಪಿ:ಆನವಟ್ಟಿ ಕೆಪಿಎಸ್‌ ಶಾಲೆಯ ಪ್ರತಿಭಾಪುರಸ್ಕಾರ ಸಮಾರಂಭವನ್ನು ಸಿಡಿಸಿ ಕಾರ್ಯಾಧ್ಯಕ್ಷ ನಾಗರಾಜ ಶುಂಠಿ ಉದ್ಘಾಟಿಸಿದರು.

------------------------

7ಎಎನ್‌ಟಿ2ಇಪಿ: ಮಳೆಯನ್ನು ಲೆಕ್ಕಿಸದೇ ಛತ್ರಿ ಹಿಡಿದು ತಮ್ಮ ಮಕ್ಕಳ ಸಾಧನೆಗೆ ಸಾಕ್ಷಿಯಾದ ಪೋಷಕರು.

----------------