ಕೊಪ್ಪಳ-ಭಾಗ್ಯನಗರದ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲು ಆಗ್ರಹ

| Published : Jul 10 2024, 12:32 AM IST

ಸಾರಾಂಶ

ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ, ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ಆಗುವ ಹಾನಿ ತಪ್ಪಿಸಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಮತ್ತು ಭಾಗ್ಯನಗರದಲ್ಲಿ ಹಾದು ಹೋಗಿರುವ ರಾಜಕಾಲುವೆ ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ, ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಮಳೆಗಾಲದಲ್ಲಿ ಆಗುವ ಹಾನಿ ತಪ್ಪಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಗಟನೆಗಳ ಒಕ್ಕೂಟದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪಳ ನಗರ ಹಾಗೂ ಭಾಗ್ಯನಗರದ ರಾಜಕಾಲುವೆಗಳನ್ನು ಅತಿಕ್ರಮಿಸಿ, ಕೆಲವರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಕಾರಣದಿಂದ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಜನರು ವಾಸಿಸುವ ಮನೆಗಳಿಗೆ ನೀರು ನುಗ್ಗುತ್ತಿವೆ. ಕಳೆದ ೧೫ ದಿನಗಳ ಹಿಂದೆ ನಗರದಲ್ಲಿ ತೀವ್ರ ಮಳೆ ಸುರಿದಾಗ ಕಲ್ಯಾಣ ನಗರ, ಕುವೆಂಪು ನಗರ ಹಾಗೂ ಇತರೆ ಪ್ರದೇಶ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯೊಳಗಿನ ಕಾಳು-ಕಡಿ, ಬೆಲೆ ಬಾಳುವ ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಇದಲ್ಲದೆ ಮನೆಯೊಳಗಡೆ ಹಾವು, ಇತರೆ ವಿಷ ಜಂತುಗಳು ಸೇರಿಕೊಂಡಿದ್ದರಿಂದ ಜನರು ತೊಂದರೆ ಅನುಭವಿಸಿದರು.

ನಗರದ ಹುಲಿಕೆರೆಯ ಗುಡ್ಡದ ಮೇಲಿನಿಂದ ಹರಿಯುವ ನೀರು ಹಲವು ವಾರ್ಡ್‌ಗಳ ಮೂಲಕ ರಾಜಕಾಲುವೆಯಿಂದ ಭಾಗ್ಯನಗರದ ಮೂಲಕ ಹಿರೇಹಳ್ಳ ಸೇರುತ್ತದೆ. ಕುಷ್ಟಗಿ ಮುಖ್ಯ ರಸ್ತೆಯಿಂದ ಪ್ರಾರಂಭಗೊಳ್ಳುವ ರಾಜಕಾಲುವೆ ಮೂಲಕ ಹರಿಯುವ ನೀರು ಭಾಗ್ಯನಗರದ ರಾಜಕಾಲುವೆಯಿಂದ ಹಿರೇಹಳ್ಳ ಸೇರುತ್ತದೆ. ಮೇಲ್ಕಾಣಿಸಿದ ಎರಡು ರಾಜಕಾಲುವೆಗಳು ಮತ್ತು ಕುವೆಂಪು ನಗರದ ರಾಜಕಾಲುವೆ ಸೇರಿದಂತೆ ಅನೇಕ ರಾಜಕಾಲುವೆಗಳನ್ನು ಅತಿಕ್ರಮಿಸಿ, ಅನಧಿಕೃತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕಾರಣದಿಂದ ಮಳೆಗಾಲದ ಸಂದರ್ಭದಲ್ಲಿ ಮುಖ್ಯರಸ್ತೆ, ಒಳರಸ್ತೆಗಳ ಮೇಲೆ ನೀರು ಹಳ್ಳದಂತೆ ಹರಿಯುತ್ತದೆ. ಈ ಕಾರಣದಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಕೊಪ್ಪಳ ಮತ್ತು ಭಾಗ್ಯನಗರದ ಎಲ್ಲ ರಾಜಕಾಲುವೆಗಳ ಸರ್ವೆ ನಡೆಸಿ, ಹದ್ದುಬಸ್ತು ನಿಗದಿ ಮಾಡಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ, ತಡೆಗೋಡೆ ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಆಗ್ರಹಿಸಿದ್ದಾರೆ.

ಅಲ್ಲಮ ಪ್ರಭು ಬೆಟ್ಟದೂರು, ಡಿ.ಎಚ್. ಪೂಜಾರ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಕೆ.ಬಿ. ಗೋನಾಳ, ಬಸವರಾಜ ನರೇಗಲ್ ಮೊದಲಾದವರು ಇದ್ದರು.