ಹಾವೇರಿ: ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ. ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಸಂರಕ್ಷಣೆ ಮಾಡಿಟ್ಟುಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಉಗ್ರಾಣಗಳನ್ನು ನಿರ್ಮಿಸಬೇಕೆಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗುತ್ತಿದೆ. ರೈತರಿಗೆ ಯೋಗ್ಯ ಬೆಲೆ ಸಿಗದೆ ಒದ್ದಾಡುತ್ತಿದ್ದಾರೆ. ಬೆಳೆಯನ್ನು ಸಂರಕ್ಷಣೆ ಮಾಡಿಟ್ಟುಕೊಳ್ಳಲು ಸರ್ಕಾರದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಉಗ್ರಾಣಗಳನ್ನು ನಿರ್ಮಾಣ ಮಾಡಬೇಕು. ಜತೆಗೆ ಹಾವೇರಿ ಜಿಲ್ಲೆಯ 80 ಸಾವಿರ ಬಗರಹುಕುಂ ಹಾಗೂ ಭೂ ಸಾಗುವಳಿದಾರರು ಇದ್ದು, ಕೇವಲ ಬೆರಳಣಿಕೆಯಷ್ಟು ಮಾತ್ರ ಹಕ್ಕುಪತ್ರ ನೀಡಲಾಗಿದೆ. ಉಳಿದವರಿಗೆ ಇನ್ನೂ ಹಕ್ಕುಪತ್ರ ಕೊಟ್ಟಿಲ್ಲ. ತಮ್ಮ ಪೂರ್ವಜರ ಕಾಲದಿಂದಲೂ ಜಮೀನು ಉಳುಮೆ ಮಾಡಿಕೊಂಡು ಬಂದಿದ್ದರೂ ಗ್ರಾಮಾಡಳಿತಾಧಿಕಾರಿಗಳು, ಕಂದಾಯ ಅಧಿಕಾರಿಗಳ ಎಡವಟ್ಟಿನಿಂದ ಇನ್ನೂ ಸರ್ಕಾರಿ ಪಡಾ, ಗೋಮಾಳ ಎಂದೇ ನಮೂದಿವೆ. ಇಲಾಖೆಯ 25 ಮಾನದಂಡಗಳನ್ನು ಸಡಿಲಗೊಳಿಸಿ, ಭೂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿದರು.ಜಿಲ್ಲೆಯಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ ಭೂಮಿಯ ಸರ್ವೇ ಮಾಡಲಿಕ್ಕೆ ಜಿಪಿಆರ್‌ಎಸ್ ಮಾಪನವನ್ನು ಸರ್ಕಾರವೇ ಒದಗಿಸಬೇಕು. ಇಲ್ಲದಿದ್ದಲ್ಲಿ ಬಾಡಿಗೆ ರೂಪದಲ್ಲಿ ತೆಗೆದುಕೊಂಡು ರೈತರಿಗೆ 12ರಿಂದ 15 ಸಾವಿರ ರು.ಗಳವರೆಗೆ ವಸೂಲಿ ಮಾಡುತ್ತಿದ್ದಾರೆ. ಸರ್ಕಾರದಿಂದಲೇ ಭೂಮಿ ಸರ್ವೇ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು. ಏತನ್ಮಧ್ಯೆ ರೈತರ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು ಬಗೆಹರಿಸದೆ ನಿರ್ಲಕ್ಷಿಸುತ್ತಿವೆ. ಹೀಗಾಗಿ ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘ ವಿವಿಧ ರೈತ ಸಂಘಗಳನ್ನು ವಿಲೀನ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಫಕ್ಕಿರೇಶ ಕಾಳಿ, ಫಕ್ಕೀರೇಶ ಹುರಳಿಕುಪ್ಪಿ, ನೀಲಪ್ಪ ಹುಲಗಮ್ಮನವರ, ಫಕ್ಕೀರಪ್ಪ ವಡೆಯನಪುರ, ಶಿವಾನಂದಪ್ಪ ಮತ್ತಿಹಳ್ಳಿ, ಮಂಜುನಾಥ ಹಿರೇಮಠ, ಸೈಫುಲ್‌ಸಾಬ ಕಮಗಾಲ, ಸಂಗಮೇಶ ನಾಗನೂರ, ಪ್ರಕಾಶ ಬಳಿಗಾರ, ಮಂಜಪ್ಪ ಯಲಿಗಾರ, ನಿಂಗಪ್ಪ ವಾಲೀಕಾರ, ಲಕ್ಷ್ಮಣ ಕಿಳ್ಳಿಕ್ಯಾತರ ಇದ್ದರು.ದೇಶಕ್ಕೆ ಅನ್ನ ಹಾಕುವ ರೈತರು ಶೇ.74ರಷ್ಟಿದ್ದರೂ ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಸರ್ಕಾರ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಕೃಷಿ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಕೆ ಮಾಡಬೇಕು. ಕಣ್ಮರೆಯಾಗುತ್ತಿರುವ ಸಿರಿಧಾನ್ಯ, ದವಸ ಧಾನ್ಯಗಳು, ತರಕಾರಿ, ಹಣ್ಣುಗಳ ಬಗ್ಗೆ ಮಕ್ಕಳಿಗೆ ಪರಿಚಯಿಸುವ ಮೂಲಕ ಕೃಷಿ ವಲಯಕ್ಕೆ ಕರೆತರುವ ಪ್ರಯತ್ನ ಮಾಡಬೇಕು ಎಂದು ಉತ್ತರ ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.ಐತಿಹಾಸಿಕ ಹೆಗ್ಗೇರಿಕೆರೆ, ರಾಜಕಾಲುವೆ, ಉಪ ಕಾಲುವೆಗಳು ಒತ್ತುವರಿಯಾಗಿದ್ದುö, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಬೇಕು. ಹೆಗ್ಗೇರಿಕೆರೆ ಕೋಡಿ ಬಿದ್ದಾಗ ಕೆರೆನೀರು ಸರಾಗವಾಗಿ ಹರಿದು ವರದಾ ನದಿ ತಲುಪಬೇಕು. ಕಾಗಿನೆಲೆ ರಸ್ತೆ, ಕೆರಿಮತ್ತಿಹಳ್ಳಿ ರಸ್ತೆ, ಹೆಗ್ಗೇರಿಕೆರೆ ರಸ್ತೆ ಅಂಡರ್‌ಬ್ರಿಡ್ಜಗಳು ಅಪಘಾತವಲಯವಾಗಿವೆ. ಹಮ್ಸ್ ಅಥವಾ ಸೂಚನಾ ಫಲಕ ಅಳವಡಿಸಬೇಕು ಎಂದು ಭೂಮಿ ಪುತ್ರ ರೈತ ಸಂಘಟನೆ ಜಿಲ್ಲಾಧ್ಯಕ್ಷ ಫಕ್ಕೀರಗೌಡ ಗಾಜೀಗೌಡ್ರ ಹೇಳಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಉಗ್ರಾಣ ನಿರ್ಮಾಣಕ್ಕೆ ಆಗ್ರಹ
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಯಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದೆ. ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಸಂರಕ್ಷಣೆ ಮಾಡಿಟ್ಟುಕೊಳ್ಳಲು ರಾಜ್ಯ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಉಗ್ರಾಣಗಳನ್ನು ನಿರ್ಮಿಸಬೇಕೆಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಒತ್ತಾಯಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.