ಸಾರಾಂಶ
ಯಾದಗಿರಿ ನಗರದಲ್ಲಿರುವ ಕೊಲೂರು ಮಲ್ಲಪ್ಪಾಜಿರವರ ಸಮಾದಿ ಸ್ಥಳಕ್ಕೆ ಇನ್‌ಸೈಟ್ಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಅವರು ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಲ್ಯಾಣ ಕರ್ನಾಟಕದ ಗಾಂಧಿ ಎಂದೇ ಕರೆಯಲಾಗುತ್ತಿದ್ದ ದಿ. ಕೋಲೂರು ಮಲ್ಲಪ್ಪಾಜಿಯವರ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡದೆ ವಿಳಂಬ ಮಾಡುತ್ತಿರುವುದು ಹೋರಾಟಗಾರನಿಗೆ ಅಪಮಾನ ಮಾಡಿದಂತಾಗಿದೆ ಎಂದು ದಾವಣಗೆರೆ ಲೋಕಸಭಾ ಪರಾಜಿತ ಅಭ್ಯರ್ಥಿ ಹಾಗೂ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಆರೋಪಿಸಿದರು.ನಗರದಲ್ಲಿರುವ ಕೋಲೂರು ಮಲ್ಲಪ್ಪಾಜಿರವರ ಸಮಾದಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ನಂತರ ಮಾತನಾಡಿ ಅವರು, ಕೋಲೂರು ಮಲ್ಲಪ್ಪಾಜಿಯವರ ಸ್ವಾತಂತ್ರ್ಯಕ್ಕಾಗಿ ಮತ್ತು ಹೈದ್ರಾಬಾದ್ ಕರ್ನಾಟಕದಲ್ಲಿ ರಜಾಕಾರರ ವಿರುದ್ಧ ಹೋರಾಡಿದ ಮಹಾನ್ ನಾಯಕ ಅವರು.
ಮಹಾತ್ಮಾ ಗಾಂಧೀಜಿಯ ಅನುಯಾಯಿಳಾಗಿದ್ದ ಅವರು, ಜವರಲಾಲ್ ನೆಹರು ಇಂದಿರಾಗಾಂಧಿಯ ಪರಮಾಪ್ತರಾಗಿದ್ದರು. ದಕ್ಷಿಣ ಭಾರತದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಹುದ್ದೆಯನ್ನು ನಿಭಾಯಿಸಿ ಕೇಂದ್ರದಲ್ಲಿ ಹಲವು ವರ್ಷ ಸತತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಕೂಡ ಶ್ರಮಿಸಿದ್ದಾರೆ ಎಂದರು.ಅವರು ಶಾಸಕರಾಗಿ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸಿಎಂ ಸ್ಥಾನ ಒದಗಿ ಬಂದರೂ ಕೂಡ ತಿರಸ್ಕರಿಸಿ, ಬೇಡ ಎಂದು ಡಿ.ದೇವರಾಜ ಅರಸರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಸಹಕಾರದಿಂದಲೇ ರಾಜಕೀಯಕ್ಕೆ ಬಂದ ಈ ಭಾಗದ ಹಲವು ಹಿರಿಯ ರಾಜಕಾರಣಿಗಳು ಅವರನ್ನು ಮರೆತಂತೆ ಕಾಣುತ್ತಿದೆ. ರಾಜಕೀಯ ಗುರುವಿನ ಋಣ ತೀರಿಸುವಲ್ಲಿ ವಿಫಲರಾಗಿದ್ದಾರೆ. ಅವರ ತತ್ವಾದರ್ಶಗಳು ಸಾಮಾಜಮುಖಿ ಕೆಲಸಗಳು ಯುವ ರಾಜಕಾರಣಿಗಳಿಗೆ ಸ್ಪೂರ್ತಿಯಾಗಿವೆ ಎಂದರು.
ಮಹಾನ್ ನಾಯಕನ ಸ್ಮಾರಕ ನಿರ್ಮಾಣಕ್ಕಾಗಿ ಸರಕಾರ ಹಾಗೂ ಜಿಲ್ಲಾಡಳಿತ ಮುಂದಾಗಿ, ಯಾದಗಿರಿ ನಗರದ ಪ್ರತಿಷ್ಠಿತ ಸ್ಥಳದಲ್ಲಿ ನಾಲ್ಕು ಎಕರೆ ಭೂಮಿ ಮಂಜೂರು ಮಾಡಿ ಅವರ ಸ್ಮಾರಕ ಸಭಾಭವನ ಹಾಗೂ ಮ್ಯೂಸಿಯಂ ನಿರ್ಮಾಣ ಮಾಡುವಂತೆ ಒತ್ತಾಯಿಸಿದ ಅವರು, ಒಂದು ವೇಳೆ ವಿಳಂಬ ನೀತಿ ತೋರಿದಲ್ಲಿ ಜಿಲ್ಲಾಡಳಿತದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಈ ವೇಳೆ ಇನ್‌ಸೈಟ್ಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಜಿ.ಬಿ. ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ವತಿಯಿಂದ ತಾಲೂಕು ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ತಾಲೂಕಾಧ್ಯಕ್ಷರಾದ ಸೂರ್ಯಕಾಂತ ಅಲ್ಲಿಪೂರ, ಮಾಜಿ ತಾಲೂಕಾಧ್ಯಕ್ಷ ಹೊನ್ನಪ ಮುಸ್ಟೂರ, ಮಾಜಿ ತಾಪಂ ಸದಸ್ಯರಾದ ಮರಿಲಿಂಗಪ್ಪ ಕುಮನೂರ, ಮಲ್ಲಯ್ಯ ಕಸಿಬಿ, ಬೀರೇಶ್ ಚಿರತೆನೊರ್, ಮಾಳಿಂಗರಾಯ ಕಂದಳ್ಳಿ, ಸಾಬಣ್ಣ ಬಳಿಚಕ್ರ, ಸಿದ್ದು ಮಕ್ತಲ್, ಹಣಮಂತ್ರಾಯಗೌಡ ತೇಕರಾಳ, ಶರಣಪ್ಪ ಶೆಟ್ಟಿಗೇರಾ, ಬೀರಲಿಂಗ ದದ್ದಲ್ ಇತರರಿದ್ದರು.