ಸಾರಾಂಶ
ಬ್ಯಾಡಗಿ: ಬ್ಯಾಡಗಿ-ರಾಣಿಬೆನ್ನೂರು ಮಾರ್ಗದಲ್ಲಿ ಸಿಡಿ ಮತ್ತು ರಾಜಕಾಲುವೆ ನಿರ್ಮಿಸದಿರುವ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಖಂಡಿಸಿ ತಾಲೂಕಿನ ಕದರಮಂಡಲಗಿ ಗ್ರಾಮಸ್ಥರು ಸುಮಾರು ನಾಲ್ಕೈದು ತಾಸುಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾ.ಪಂ.ಮಾಜಿ ಅಧ್ಯಕ್ಷ ಕಾಂತೇಶ ನಾಯ್ಕರ ಮಾತನಾಡಿ, ಗ್ರಾಮದ ಗುಡ್ಡಗಳಿಂದ ರಭಸವಾಗಿ ಹರಿದು ಬಂದು ರಾಜ ಕಾಲುವೆಯಿಂದ ಹಳ್ಳ ಸೇರಲಿದೆ. ಆದರೆ ಕಾಲುವೆ, ಸಿಡಿ ಇಲ್ಲದ ಪರಿಣಾಮ ತೀವ್ರ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದ್ದೇವೆ ಈ ಹಿಂದೆ ದೊಡ್ಡ ಚರಂಡಿ ನಿರ್ಮಾಣಕ್ಕೆ ರು. 4.25 ಕೋಟಿ ಹಾಗೂ ಸಿಡಿಗೆ ರು. 1.20 ಕೋಟಿ ಪ್ರಸ್ತಾವನೆ ಸಲ್ಲಿಸಿದೆ, ಪ್ರತಿ ವರ್ಷವೂ ಮಳೆ ಜೋರಾಗಿ ಬಂದಾಗ ರಸ್ತೆ ಮೂಲಕ ಸುತ್ತಲಿನ ಮನೆಗಳಿಗೆ ನೀರು ನುಗ್ಗುತ್ತಿದ್ದು ಆತಂಕ ಉಂಟು ಮಾಡುತ್ತಿದೆಯಲ್ಲದೇ ರಸ್ತೆಗಳನ್ನು ಹಾಳು ಮಾಡುತ್ತಿದೆ. ಈ ಕುರಿತು ಎಂಜಿನಿಯರ್‌ಗೆ ಖುದ್ದಾಗಿ ತಿಳಿಸಿದರೂ ಪ್ರಯೋಜವಾಗಿಲ್ಲ, ಇಲ್ಲದ ಸಬೂಬು ಹೇಳುತ್ತಿದ್ದಾರೆ. ಶಾಸಕರು ಅಥವಾ ಜಿಲ್ಲಾಧಿಕಾರಿಗಳಾಗಲಿ ಭರವಸೆ ನೀಡುವವರೆಗೂ ರಸ್ತೆತಡೆ ಕೈಬಿಡುವುದಿಲ್ಲವೆಂದು ಬಿಗಿಪಟ್ಟು ಹಿಡಿದರು.ಶಾಸಕರ ಭರವಸೆಯಿಂದ ಪ್ರತಿಭಟನೆ ವಾಪಸ್: ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಗ್ರಾಮದ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಗ್ರಾಮ ರಸ್ತೆ ಸೇರಿದಂತೆ ಐದಾರು ರಸ್ತೆ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸೇರಿದಂತೆ ಲೋಕೋಪಯೋಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಎರಡ್ಮೂರು ತಿಂಗಳಲ್ಲಿ ಮಂಜೂರಾಗಲಿವೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಆಂಜನೇಯ ಕ್ಷೇತ್ರಕ್ಕೆ ಬಂದು ಹೋಗಲಿದ್ದು, ಇಲ್ಲಿನ ರಸ್ತೆ ಕಾಮಗಾರಿಗೆ ವಿಶೇಷ ಒತ್ತು ನೀಡುವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ಸು ಪಡೆದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಕಾಂತೇಶ ಕರಲಿಂಗಣ್ಣನವರ, ಈರಣ್ಣ ಬಡಿಗೇರ, ಶ್ರೀಶೈಲ ಸಣ್ಣಪ್ಪನವರ, ಪ್ರದೀಪ ನಂದಿಕೇಶ್ವರಮಠ, ನಾಗರಾಜ ಹೊಂಬರಡಿ, ಹನುಮಂತಪ್ಪ ಬುಡಪನಹಳ್ಳಿ, ಮೌನೇಶ ಬಡಿಗೇರ ಇದ್ದರು.ಭಕ್ತರಿಗೂ ಪ್ರತಿಭಟನೆ ಬಿಸಿ: ವಿಜಯದಶಮಿ ಶನಿವಾರದಂದು ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು, ಆದರೆ ಬ್ಯಾಡಗಿ ಮಾರ್ಗವಾಗಿ ಆಗಮಿಸುವ ಭಕ್ತರಿಗೆ ದೇವಸ್ಥಾನದಿಂದ ಅರ್ಧ ಕೀ.ಮೀ.ದೂರದಿಂದ ಪಾದಯಾತ್ರೆ ಮೂಲಕ ನಡೆದು ದರ್ಶನ ಪಡೆಯುವಂತಾಯಿತು, ಅನಿವಾರ್ಯವಾಗಿ ವಾಹನಗಳು ರಾಮನಹಳ್ಳಿ ಕ್ರಾಸ್ ಮಾರ್ಗವಾಗಿ ಸುತ್ತುವರೆದು ಓಡಾಡಬೇಕಾಯಿತು, ರಸ್ತೆಯಲ್ಲಿ ಚಕ್ಕಡಿ, ಎತ್ತುಗಳನ್ನು ಕಟ್ಟಿಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಎಲ್ಲ ಬೈಕ್, ಕಾರುಇತ್ಯಾದಿ ವಾಹನಗಳನ್ನು ಕೆಲಕಾಲರಸ್ತೆ ಬಳಿ ನಿಲ್ಲಿಸಿ ದೇವರಿಗೆ ನಡೆದು ಸಾಗಿದರು.