ಅರಸೀಕೆರೆಯಿಂದ ಹಾಸನಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಹಂಪ್‌ಗಳು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದ್ದು, ಪ್ರತಿದಿನವೂ ಅಪಘಾತಗಳ ಭೀತಿ ಎದುರಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮಳೆಮಲ್ಲೇಶ್ವರ ವೃತ್ತ, ಸುಬ್ರಹ್ಮಣ್ಯ ನಗರ ಬಡಾವಣೆ ಸೇರಿದಂತೆ ಹಲವೆಡೆ ಈ ಸಮಸ್ಯೆ ಗಂಭೀರವಾಗಿದೆ. ಈಗಾಗಲೇ ಅನೇಕರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಅರಸೀಕೆರೆನಗರದಿಂದ ಹಾಸನಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ರಸ್ತೆ ಹಂಪ್‌ಗಳು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದ್ದು, ಪ್ರತಿದಿನವೂ ಅಪಘಾತಗಳ ಭೀತಿ ಎದುರಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಮಾರ್ಗದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ರಸ್ತೆ ಎರಡೂ ಬದಿಗಳಲ್ಲಿರುವ ಹಂಪ್ಸ್‌ಗಳ ಮಧ್ಯೆ ಹಾಗೂ ಕೊನೆಯ ಭಾಗದಲ್ಲಿ ಅಗತ್ಯವಿರುವ ಜಾಗವನ್ನು ಬಿಟ್ಟಿರುವುದರಿಂದ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುವ ಘಟನೆಗಳು ಸಂಭವಿಸುತ್ತಿವೆ. ಮಳೆಮಲ್ಲೇಶ್ವರ ವೃತ್ತ, ಸುಬ್ರಹ್ಮಣ್ಯ ನಗರ ಬಡಾವಣೆ ಸೇರಿದಂತೆ ಹಲವೆಡೆ ಈ ಸಮಸ್ಯೆ ಗಂಭೀರವಾಗಿದೆ. ಈಗಾಗಲೇ ಅನೇಕರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.ವಿಶೇಷವಾಗಿ ಅಂಬೇಡ್ಕರ್ ನಗರದಿಂದ ಹಾಸನ ಮುಖ್ಯ ರಸ್ತೆಗೆ ಸಂಪರ್ಕಿಸುವ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ವಾಹನಗಳು ಅತೀ ವೇಗದಲ್ಲಿ ಸಂಚರಿಸುತ್ತಿದ್ದು, ಶಾಲಾ ಮಕ್ಕಳು, ವಯೋವೃದ್ಧರು ರಸ್ತೆ ದಾಟುವ ಸಂದರ್ಭದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಇದೇ ರೀತಿಯ ಸ್ಥಿತಿ ಪ್ರಿಯದರ್ಶಿನಿ ಶಾಲೆಯ ಬೋರ್ಡ್ ಮುಂಭಾಗದಲ್ಲಿಯೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಕುರಿತು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್‌ರಿಗೆ ಅರ್ಜಿ ಸಲ್ಲಿಸಿ ಮಾತನಾಡಿದ ಬಿಜೆಪಿ ಮುಖಂಡ ಶಿವರಾಜ್ ಅವರು, “ಅವೈಜ್ಞಾನಿಕ ಹಂಪ್ಸ್‌ಗಳನ್ನು ತಕ್ಷಣ ತೆರವುಗೊಳಿಸಿ, ರಸ್ತೆ ಎರಡೂ ಬದಿಗಳಲ್ಲೂ ಗುಣಮಟ್ಟದ ಹಾಗೂ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಹಂಪ್ಸ್‌ಗಳನ್ನು ನಿರ್ಮಿಸಬೇಕು. ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಿನಲ್ಲಿ ಅಪಘಾತಗಳೇ ಹೆಚ್ಚಾಗುವ ಪರಿಸ್ಥಿತಿ ಉಂಟಾಗಲಿದೆ” ಎಂದು ಎಚ್ಚರಿಸಿದರು.ಮಕ್ಕಳ ಜೀವ ರಕ್ಷಣೆ ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ಸರ್ಕಾರಿ ಶಾಲೆ ಮತ್ತು ಪ್ರಿಯದರ್ಶಿನಿ ಶಾಲೆ ಮುಂಭಾಗದಲ್ಲಿ ತುರ್ತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್‌ರಿಗೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರದಿದ್ದಲ್ಲಿ ಮಕ್ಕಳೊಂದಿಗೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.