ಟಿ. ನರಸೀಪುರದಲ್ಲಿ ಕ್ರೀಡಾಂಗಣಕ್ಕೆ ಆಗ್ರಹಿಸಿ ಮ್ಯಾರಥಾನ್‌ ನಡಿಗೆ

| Published : Feb 18 2025, 12:32 AM IST

ಸಾರಾಂಶ

ಕಾಲೇಜು ರಸ್ತೆ, ಲಿಂಕ್ ರಸ್ತೆ ಹಾಗೂ ಪುರಸಭೆ ರಸ್ತೆಗಳಲ್ಲಿ ಸಂಚರಿಸಿ, ಹಕ್ಕೊತ್ತಾಯದ ಘೋಷಣೆ ಕೂಗುತ್ತಾ ತಾಲೂಕು ಕಚೇರಿ ಆವರಣಕ್ಕೆ ತೆರಳಿ ಹೋರಾಟವನ್ನು ಶಾಂತಿಯುತವಾಗಿ ಯಶಸ್ವಿ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ಕ್ರೀಡಾಪಟುಗಳು, ವಾಯುವಿಹಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಭಾನುವಾರ ಮ್ಯಾರಥಾನ್ ನಡಿಗೆ ಕ್ರೀಡಾಂಗಣದ ಕಡೆಗೆ'''''''' ಘೋಷ ವಾಕ್ಯದೊಡನೆ ಬೃಹತ್ ಪ್ರತಿಭಟನೆ ನಡೆಸಿದರು.ಕ್ರೀಡಾಂಗಣ ನಿರ್ಮಾಣಕ್ಕೆ ಆಡಳಿತಾರೂಢ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಸಮವಸ್ತ್ರ ಧರಿಸಿ ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡಿದ್ದ ಮ್ಯಾರಥಾನ್ ನಡಿಗೆ ಹೋರಾಟಗಾರರು ಕಾಲೇಜು ರಸ್ತೆ, ಲಿಂಕ್ ರಸ್ತೆ ಹಾಗೂ ಪುರಸಭೆ ರಸ್ತೆಗಳಲ್ಲಿ ಸಂಚರಿಸಿ, ಹಕ್ಕೊತ್ತಾಯದ ಘೋಷಣೆ ಕೂಗುತ್ತಾ ತಾಲೂಕು ಕಚೇರಿ ಆವರಣಕ್ಕೆ ತೆರಳಿ ಹೋರಾಟವನ್ನು ಶಾಂತಿಯುತವಾಗಿ ಯಶಸ್ವಿಗೊಳಿಸಿದರು.ತಾಲೂಕು ಕೇಂದ್ರದಲ್ಲಿಯೇ ಕ್ರೀಡಾಂಗಣ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿರುವ ಹೋರಾಟ ಸಮಿತಿಯ ಕರೆಯ ಹಿನ್ನೆಲೆಯಲ್ಲಿ ಕಿರಿಯರು - ಹಿರಿಯರು, ಯುವಕ - ಯುವತಿಯರು, ನೌಕರರು - ನಿವೃತ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಬಿಸಿಲನ್ನು ಲೆಕ್ಕಿಸದೆ ಮ್ಯಾರಥಾನ್ ನಡಿಗೆಯಲ್ಲಿ ಪಾಲ್ಗೊಂಡರು.ಸ್ಕೇಟಿಂಗ್ ಶೂಸ್, ಕರಾಟೆ ತರಬೇತಿ ವಸ್ತ್ರ ಧರಿಸಿ ಹಾಗೂ ಕ್ರಿಕೆಟ್ ಬ್ಯಾಟು ಬಾಲ್ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪುಟಾಣಿ ಮಕ್ಕಳು ಎಲ್ಲರ ಗಮನ ಸೆಳೆದರು. ತಾಲೂಕು ಕಚೇರಿ ಮುಂಭಾಗ ಹಲವು ತಾಸುಗಳ ಕಾಲ ಧರಣಿ ಕುಳಿತು ಕ್ರೀಡಾಂಗಣಕ್ಕೆ ಒತ್ತಾಯಿಸಲಾಯಿತು.ಬಳಿಕ ರಾಜ್ಯ ಸರ್ಕಾರಕ್ಕೆ ತಹಸೀಲ್ದಾರ್ ಮೂಲಕ ಸಲ್ಲಿಸಲು ಉದ್ದೇಶಿಸಿದ್ದ ಮನವಿ ಪತ್ರವನ್ನು ಶಿರಸ್ತೇದಾರ್ ಮಂಜುಳಾ ಅವರಿಗೆ ಸಲ್ಲಿಸಲಾಯಿತು.ಮ್ಯಾರಥಾನ್ ನಡಿಗೆ ಹೋರಾಟಕ್ಕೆ ಚಾಲನೆ ನೀಡಿದ ಹಿರಿಯ ಅಥ್ಲೆಟಿಕ್ ಕ್ರೀಡಾಪಟು ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಸೋಸಲೆ ಮಹದೇವ ಮಾತನಾಡಿ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದವರ ತವರೂರಾದ ನರಸೀಪುರದಲ್ಲಿ ಕ್ರೀಡಾಂಗಣ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ. ಕ್ರೀಡಾಂಗಣ ಎಲ್ಲಾ ಜನರಿಗೂ ಅಗತ್ಯವಾಗಿ ಬೇಕಿರುವಂತಹದ್ದು, ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಕ್ರೀಡಾಂಗಣ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹೋರಾಟ ಸಮಿತಿ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಆಡಳಿತರೂಢ ಸರ್ಕಾರ ಮತ್ತು ಈ ಭಾಗದ ಜನಪ್ರತಿನಿಧಿಗಳ ಗಮನವನ್ನು ಗೌರವಯುತವಾಗಿ ಸೆಳೆಯಲು ಮ್ಯಾರಥಾನ್ ನಡಿಗೆ ಹೋರಾಟವನ್ನು ಪ್ರಾಯೋಗಿಕವಾಗಿ ನಡೆಸಿದ್ದೇವೆ. ಕ್ರೀಡಾಂಗಣ ನಿರ್ಮಾಣದ ವಿಚಾರದಲ್ಲಿ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಹೋರಾಟದ ಸ್ವರೂಪ ಬದಲಾಗಲಿದೆ. ಹಾಗಾಗಿ ಸರ್ಕಾರ ಹಾಗೂ ಜಿಲ್ಲಾ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಆಡಳಿತಾತ್ಮಕ ತಾಂತ್ರಿಕ ಸಮಸ್ಯೆ ಸರಿಪಡಿಸಿ ಕ್ರೀಡಾಂಗಣ ನಿರ್ಮಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಹಿರಿಯ ದೈಹಿಕ ಶಿಕ್ಷಕ ಆರ್.ಎಸ್. ಬಸವರಾಜು ಮಾತನಾಡಿ, ಈ ಭಾಗದ ಶಾಸಕರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಮಹದೇವಪ್ಪ ಅವರು ಮನಸ್ಸು ಮಾಡಿದರೆ ಮುಂದಿನ ವರ್ಷದೊಳಗೆ ಭವ್ಯವಾದ ಕ್ರೀಡಾಂಗಣ ತಲೆಎತ್ತಲಿದೆ. ಉಭಯ ನಾಯಕರು ತಾಲೂಕಿನ ಕ್ರೀಡಾಪಟುಗಳು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಆಕಾಂಕ್ಷೆಯನ್ನು ಅರಿತು ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.ಹೋರಾಟ ಸಮಿತಿ ಅಧ್ಯಕ್ಷ ಎಂ. ರಮೇಶ್ ಮಾತನಾಡಿ, ನಮ್ಮೂರಿನವರೇ ಆಗಿರುವ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಸದಸ್ಯರು ಪಟ್ಟಣದ ಹೃದಯ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ನಿವೇಶನ ಕಲ್ಪಿಸಿಕೊಡಬೇಕು. ಗ್ರಾಮೀಣ ಪ್ರದೇಶಗಳ ರೈತರ ಮಕ್ಕಳು ಪ್ರತಿಭಾನ್ವಿತ ಕ್ರೀಡಾಪಟುಗಳಾಗಿ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.ಮ್ಯಾರಥಾನ್ ನಡಿಗೆಯನ್ನು ಬಿಜೆಪಿ ಮುಖಂಡ, ಶಸ್ತ್ರಚಿಕಿತ್ಸಕ ಡಾ. ರೇವಣ್ಣ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ. ಪ್ರಕಾಶ್, ಜೆಎಸ್ಎಸ್ ಶಿಕ್ಷಣ ಸಂಯೋಜಕ ಜಿ.ಎಲ್. ತ್ರಿಪುರಾಂತಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ ಸೇರಿದಂತೆ ರಾಷ್ಟ್ರೀಯ ಕ್ರೀಡಾಪಟುಗಳು ಬೆಂಬಲಿಸಿ ಭಾಗವಹಿಸಿದ್ದರು. ಹೋರಾಟದ ನಡಿಗೆಯಲ್ಲಿ ಕ್ರೀಡಾಂಗಣ ಹೋರಾಟ ಸಮಿತಿ ಸಂಚಾಲಕರಾದ ಆರ್. ಮಣಿಕಂಠ ರಾಜ್ ಗೌಡ, ಎಚ್. ಆರೀಫ್, ಎಂ. ಪ್ರವೀಣ್ ಕುಮಾರ್, ಶಿವಶಂಕರ್, ಸ್ಪೋರ್ಟ್ಸ್ ಅಕಾಡಮಿ ನವೀನ್ ಕುಮಾರ್, ಬಾಲು ಮುರುಗೇಶ್, ಮಹೇಶ್, ರಘು, ಪುರಸಭಾ ಸದಸ್ಯರಾದ ಬಾದಾಮಿ ಮಂಜು, ಪ್ರಕಾಶ್, ನಾಗರಾಜ್, ಎಸ್.ಕೆ. ಕಿರಣ್, ಹೇಮಂತ್, ಪರಮೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ. ಶಿವಶಂಕರಮೂರ್ತಿ, ದೈಹಿಕ ಶಿಕ್ಷಕರಾದ ಪುಟ್ಟರಾಜು, ಜಯಪ್ಪ, ಸಿದ್ದೇಶ್, ಪ್ರಾಂಶುಪಾಲ ಎಚ್.ವಿ. ಉದಯ್ ಕುಮಾರ್, ಉಪನ್ಯಾಸಕ ಕುಮಾರಸ್ವಾಮಿ, ಯೋಗೇಶ್, ನಿವೃತ್ತ ಶಿಕ್ಷಕರಾದ ಎಚ್.ಡಿ. ಮಾದಪ್ಪ, ಉಪನ್ಯಾಸಕರಾದ ಟಿ.ಎಸ್. ಬಸವಣ್ಣ ಸ್ವಾಮಿ, ರೇಷ್ಮ ಚಂಗಪ್ಪ, ಸುನಿತಾ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಟ್ಟಸ್ವಾಮಿ, ರೈತ ಮುಖಂಡರಾದ ಸಿದ್ದೇಶ್, ಗೌರಿಶಂಕರ್, ಶಂಕರ್ , ಚಂದ್ರಶೇಖರ್, ದಸಂಸ ಮುಖಂಡರಾದ ರಾಜು, ಸೋಮಶೇಖರ್, ನಾಗರಾಜ್ ಮೂರ್ತಿ, ಉಮೇಶ್, ಶಿವಕುಮಾರ್, ಶಿವು, ನಂದ್, ವಕೀಲರಾದ ಮಹದೇವಸ್ವಾಮಿ, ಕೃಷ್ಣಮೂರ್ತಿ, ಜ್ಞಾನೇಂದ್ರ ಮೂರ್ತಿ, ಪರಮೇಶ್, ಕ್ರೀಡಾಭಿಮಾನಿಗಳಾದ ನಿಕಿಲ್ ವಿರಾಟ್, ವಣ್ಣ, ರವಿಚಂದ್ರ, ಜಯಕುಮಾರ್, ಮಹೇಶ್, ಇಮ್ರಾನ್, ಬಸವರಾಜು, ಚಂದ್ರು, ಉಮೇಶ್, ಗಂಗಾಧರ್, ವಿಕ್ಕಿ, ಯೋಗೇಶ್ ಇದ್ದರು.