. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ರೈತರಿಗೆ ಹಗಲಿನ ವೇಳೆ ತ್ರೀಫೇಸ್ ವಿದ್ಯುತ್ ನೀಡಬೇಕು. ತುರ್ತಾಗಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ರ ವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ರೈತರು ಆಗ್ರಹಿಸಿದರು.

ಸಂಡೂರು: ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜೋಗ ಗ್ರಾಮ ಘಟಕದ ಮುಖಂಡರು ತೋರಣಗಲ್ಲಿನ ಜೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.ಸಂಘದ ಜಿಲ್ಲಾ ಉಪಾಧ್ಯಕ್ಷ ಜೆ.ಎಂ. ಚನ್ನಬಸಯ್ಯ ಹಾಗೂ ತಾಲೂಕು ಘಟಕದ ಅಧ್ಯಕ್ಷ ಜಿ. ಪಂಪನಗೌಡ ಜೆಸ್ಕಾಂ ಸೆಕ್ಷನ್ ಅಧಿಕಾರಿ ಸಾಯಿ ಪ್ರಸಾದ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ, ತಾಲೂಕಿನಾದ್ಯಂತ ಮುಂಗಾರು ಮಳೆ ಶೇ. ೫೮ರಷ್ಟು ಕೊರತೆಯಾಗಿದ್ದು, ಬಿತ್ತನೆ ಪ್ರಮಾಣ ಕುಸಿದಿದೆ. ಮಳೆ ಇಲ್ಲದೇ ಜನ ಜಾನುವಾರುಗಳು ತತ್ತರಿಸುವಂತಾಗಿದೆ. ಬರದ ಛಾಯೆ ಆವರಿಸಿದೆ. ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಅಂತರ್ಜಲದ ಮಟ್ಟ ವೃದ್ಧಿಸಿದೆ. ಕೊಳವೆ ಬಾವಿಗಳಿಂದ ಸ್ವಲ್ಪ ಹೆಚ್ಚಾಗಿಯೇ ನೀರು ಬರುತ್ತಿದೆ. ಸಿಗುವ ನೀರನ್ನು ಬಳಸಿಕೊಂಡು ರೈತರು ಅಗತ್ಯ ಬೆಳೆಗಳನ್ನು ಬೆಳೆಸಿದ್ದಾರೆ. ಆದರೆ, ಪಂಪ್‌ಸೆಟ್‌ಗಳ ಮೂಲಕ ಬೆಳೆಗಳಿಗೆ ನೀರು ಹರಿಸುವ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಲೋಡ್ ಶೆಡ್ಡಿಂಗ್‌ನಿಂದಾಗಿ ತಾಲೂಕಿನ ಗ್ರಾಮೀಣ ಭಾಗದ ಪಂಪ್‌ಸೆಟ್‌ಗಳಿಗೆ ನಿಯಮಾನುಸಾರ ೭ ಗಂಟೆಗಳ ಕಾಲ ನಿರಂತರ ತ್ರಿ ಫೇಸ್‌ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ದೂರಿದರು.

ಸಾಲ-ಶೂಲ ಮಾಡಿ ದುಬಾರಿ ಬೀಜ, ಗೊಬ್ಬರ ಹಾಕಿ ಬಿತ್ತಿದ ಬೆಳೆಗಳು ನೀರಿಲ್ಲದೆ ನಾಶವಾಗುತ್ತಿವೆ. ಕೈಕೊಟ್ಟ ಮುಂಗಾರು ಮತ್ತು ವಿದ್ಯುತ್ ಸಮಸ್ಯೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ರಾತ್ರಿ ಸಮಯದಲ್ಲಿ ವಿದ್ಯುತ್ ನೀಡುವುದರಿಂದ ಕಾಡು ಪ್ರಾಣಿಗಳ ದಾಳಿಗೆ ರೈತರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಹಗಲು ಹೊತ್ತಿನಲ್ಲಿ ವಿದ್ಯುತ್ ಅನ್ನು ಸಮರ್ಪಕವಾಗಿ ರೈತರ ಪಂಪ್‌ಸೆಟ್‌ಗಳಿಗೆ ಪೂರೈಸಬೇಕು. ತಾಲೂಕಿನಾದ್ಯಂತ ಸೋಲಾರ್ ಹಾಗೂ ವಿಂಡ್ ವಿದ್ಯುತ್ ಸ್ಥಾವರಗಳು ಹಬ್ಬಿಕೊಂಡಿದ್ದು, ಹೇರಳ ವಿದ್ಯುತ್ ಉತ್ಪಾದನೆಯಾಗುತ್ತಿದೆ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ರೈತರಿಗೆ ಹಗಲಿನ ವೇಳೆ ತ್ರೀಫೇಸ್ ವಿದ್ಯುತ್ ನೀಡಬೇಕು. ತುರ್ತಾಗಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ರ ವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡ ಎನ್. ಸುಂಕಣ್ಣ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್. ಸ್ವಾಮಿ, ರೇವಾಳ್ ಮಂಜುನಾಥ, ಯು. ಅಂಜಿನಪ್ಪ, ಎಂ. ತಿಪ್ಪೇಸ್ವಾಮಿ, ರವಿ ಚಂದ್ರರೆಡ್ಡಿ, ಓಬಿ ರೆಡ್ಡಿ, ಶ್ರೀನಿವಾಸ, ಸೂರ್ಯಪ್ರಕಾಶ್ ರೆಡ್ಡಿ, ಹಳ್ಳದ ರಾಯಪ್ಪ, ಎಚ್. ಶಿವರುದ್ರಗೌಡ, ಎನ್. ಲೋಕೇಶ್, ರುದ್ರಗೌಡ, ದೊಡ್ಡನಗೌಡ ಮುಂತಾದವರು ಉಪಸ್ಥಿತರಿದ್ದರು.