ಬಿಸಿಲಿನ ಧಗೆಗೆ ಕೂಲರ್, ಏರ್ ಕಂಡೀಶನರ್‌ಗೆ ಡಿಮ್ಯಾಂಡ್‌!

| Published : Apr 06 2024, 12:51 AM IST

ಸಾರಾಂಶ

ಈ ಬಾರಿ ಗೃಹಶಕ್ತಿ ಯೋಜನೆ ಜಾರಿಯಾದಾಗಿನಿಂದ ಕರೆಂಟ್‌ ಬಿಲ್‌ ಕಟ್ಟುವ ತಾಪತ್ರೆಯ ಇಲ್ಲ. ನಿಗದಿಗಿಂತ ಕೊಂಚ ಕರೆಂಟ್‌ ಬಿಲ್‌ ಹೆಚ್ಚಿಗೆ ಬಂದರೂ ಪರವಾಗಿಲ್ಲ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಬಿಸಿಲಿನ ಆರ್ಭಟಕ್ಕೆ ಜನತೆ ಅಕ್ಷರಶಃ ನಲುಗಿ ಹೋಗಿದ್ದು, ಇದರಿಂದ ತಾತ್ಕಾಲಿಕವಾದರೂ ಮುಕ್ತಿ ಪಡೆಯುವುದಕ್ಕಾಗಿ ಈಗ ಫ್ಯಾನ್‌ ಕೈಬಿಟ್ಟು ಕೂಲರ್‌, ಏರ್‌ ಕಂಡೀಶನರ್‌ಗಳ ಮೊರೆ ಹೋಗಿದ್ದಾರೆ. ಈ ಬಾರಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಜ್ಯೋತಿ ಯೋಜನೆಯಿಂದಾಗಿಯೂ ಕೂಲರ್‌ಗಳ ಖರೀದಿ ಕೊಂಚ ಹೆಚ್ಚಾಗಿದೆ.

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಬಿಸಿಲ ಬೇಗೆಗೆ ಚಿಕ್ಕವರಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ಹೈರಾಣಾಗಿದ್ದಾರೆ. ಕಳೆದ 10 ವರ್ಷಗಳಿಂದ ಬಿಸಿಲಿನ ಪ್ರಖರತೆ ಹೆಚ್ಚುತ್ತಾ ಸಾಗಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಒಂದೆಡೆ ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದೆ, ಮತ್ತೊಂದೆಡೆ ಉಷ್ಣಹವೆಯಿಂದಾಗಿ ಜನರು ಹೊರಬರದಂತಹ ಸ್ಥಿತಿ ನಿರ್ಮಾಣವಾಗಿದೆ.

ಸಂಚಾರ ಕ್ಷೀಣ:

ಬೆಳಗ್ಗೆ 8 ಗಂಟೆಯಾದರೆ ಸಾಕು ಸೆಕೆಯ ಆರ್ಭಟ ಆರಂಭವಾಗುತ್ತದೆ. ಮಧ್ಯಾಹ್ನದ ವೇಳೆಯಲ್ಲಂತೂ ರಸ್ತೆಗೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಅದೆಷ್ಟೋ ಜನರು ಬಿಸಿಲಿನ ಆರ್ಭಟಕ್ಕೆ ಅಂಜಿ ಮನೆಯಿಂದ ಹೊರಬರುತ್ತಿಲ್ಲ. ಇನ್ನು ಮಧ್ಯಾಹ್ನದ ವೇಳೆಯಲ್ಲಂತೂ ರಸ್ತೆಗಳಲ್ಲಿ ವಾಹನಗಳ ಓಡಾಟ ತುಂಬಾ ವಿರಳವಾಗಿರುತ್ತದೆ.

ಹೇಗಿವೆ ಕೂಲರ್‌ ಬೆಲೆ:

ಈ ಬಾರಿಯ ಬಿಸಿಲಿನ ಆರ್ಭಟದಿಂದಾಗಿ ಜನತೆ ಫ್ಯಾನ್‌ ಖರೀದಿ ಕೈಬಿಟ್ಟು ಕೂಲರ್‌, ಏರ್‌ ಕಂಡೀಶನರ್‌ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಫ್ಯಾನ್‌ಗಳ ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ, ಏರ್‌ ಕೂಲರ್‌ಗಳ ಮಾರಾಟದಲ್ಲಿ ದಿಢೀರನೇ ಏರಿಕೆ ಕಂಡುಬಂದಿದೆ. ಕೂಲರ್‌ಗಳು ₹ 2ರಿಂದ ₹ 50 ಸಾವಿರ ವರೆಗೂ ದೊರೆಯುತ್ತಿದ್ದರೆ, ಏರ್‌ ಕಂಡೀಷನರ್‌ಗಳು ₹ 20ರಿಂದ ₹ 80 ಸಾವಿರ ವರೆಗೆ ಮಾರಾಟವಾಗುತ್ತಿವೆ.

ಆನ್‌ಲೈನ್‌ ಖರೀದಿಯೇ ಜಾಸ್ತಿ:

ಅಮೇಜಾನ್‌, ಫ್ಲಿಪ್‌ಕಾರ್ಟ್‌, ಮಿಶೋ, ಸ್ನ್ಯಾಪ್‌ಡೀಲ್‌ ಸೇರಿದಂತೆ ಹಲವು ಆನ್‌ಲೈನ್‌ ಕಂಪನಿಗಳಿಂದ ಕೂಲರ್‌, ಏರ್‌ ಕಂಡೀಷನರ್‌ಗಳನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಆನ್‌ಲೈನ್‌ ಮಾರುಕಟ್ಟೆಯಲ್ಲಿ ಹಬ್ಬದ ಕೊಡುಗೆ, ಬೇಸಿಗೆ ಹಿನ್ನೆಲೆಯಲ್ಲಿ ವಿಶೇಷ ಆಕರ್ಷಕ ಕೊಡುಗೆಗಳ ಅಡಿ ಕಡಿಮೆ ಬೆಲೆಯಲ್ಲಿ ಕೂಲರ್‌ಗಳು ಸಿಗುತ್ತಿವೆ. ಹೀಗಾಗಿ ಅಂಗಡಿಗಳಿಗಿಂತ ಆನ್‌ಲೈನ್‌ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಗೆ ಮುಂದಾಗಿದ್ದಾರೆ.

ನಿತ್ಯವೂ 35-40 ಕೂಲರ್‌:

ಈ ಹಿಂದೆ ದಿನಕ್ಕೆ 2ರಿಂದ 5ರ ವರೆಗೆ ಕೂಲರ್‌ ಮಾರಾಟವಾಗುತ್ತಿದ್ದವು. ಕಳೆದ 10-12 ದಿನಗಳಿಂದ ನಿತ್ಯವೂ 35-40ಕ್ಕೂ ಅಧಿಕ ಕೂಲರ್‌ಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ಇವುಗಳ ವಿತರಣೆಗಾಗಿ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಸಂಸ್ಥೆಯ ಸಿಬ್ಬಂದಿ ಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದರು. ಕಳೆದ 15-20 ದಿನಗಳಿಂದ ಫ್ಯಾನ್‌ಗಳನ್ನು ಕೇಳುವವರೇ ಇಲ್ಲದಂತಾಗಿದೆ. ಗ್ರಾಹಕರು ಅಂಗಡಿಗೆ ಬಂದ ಕೂಡಲೇ ಕೇಳುವುದು ಬಗೆಬಗೆ ಕಂಪನಿಯ ಕೂಲರ್‌ಗಳನ್ನು. ಕಳೆದ ಬಾರಿಗಿಂತ ಈ ಬಾರಿ ಶೇ. 40-50ರಷ್ಟು ಕೂಲರ್‌ಗಳು ಹೆಚ್ಚಿಗೆ ಮಾರಾಟವಾಗಿವೆ ಎಂದು ಮಾರಾಟಗಾರ ಪ್ರಫುಲ್‌ ಜೈನ್ ಹೇಳಿದರು.ಕೆಲಸ ಮುಗಿಸಿ ಮನೆಗೆ ಹೋಗಿ ಫ್ಯಾನ್‌ ಹಾಕಿದರೆ ತಣ್ಣನೆಯ ಗಾಳಿಗಿಂತ ಬಿಸಿಗಾಳಿಯೇ ಬರುತ್ತಿದೆ. ಇದರಿಂದಾಗಿ ಮನೆಗೆ ಅಳವಡಿಸುವುದಕ್ಕಾಗಿ ಏರ್‌ ಕೂಲರ್‌ ಖರೀದಿಸಿದ್ದೇನೆ. ಇದರಿಂದಾದರೂ ತಣ್ಣನೆಯ ಗಾಳಿ ಸಿಗುತ್ತದೆಯೋ ನೋಡಬೇಕು ಎಂದು ಗ್ರಾಹಕರ ಮಹೇಶ ತಳವಾರ ಹೇಳಿದರು.

ಈ ಬಾರಿ ಗೃಹಶಕ್ತಿ ಯೋಜನೆ ಜಾರಿಯಾದಾಗಿನಿಂದ ಕರೆಂಟ್‌ ಬಿಲ್‌ ಕಟ್ಟುವ ತಾಪತ್ರೆಯ ಇಲ್ಲ. ಮನೆಯಲ್ಲಿರುವ ಫ್ಯಾನ್‌ಗಳಿಂದ ತಣ್ಣನೆಯ ಗಾಳಿ ಬರುತ್ತಿಲ್ಲ. ನಿಗದಿಗಿಂತ ಕೊಂಚ ಕರೆಂಟ್‌ ಬಿಲ್‌ ಹೆಚ್ಚಿಗೆ ಬಂದರೂ ಪರವಾಗಿಲ್ಲ, ಈಗ ಕೂಲರ್‌ ಖರೀದಿಸುತ್ತಿದ್ದೇನೆ ಎಂದು ಅಶ್ವಿನಿ ಮಂಗಳೂರ ತಿಳಿಸಿದರು.