ದೇಶದ ಒಳಿತಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಒಟ್ಟಿಗೆ ನೆನೆಯಬೇಕು: ಪ್ರೊ.ಎನ್.ಕೆ. ಲೋಕನಾಥ್

| Published : Apr 06 2024, 12:51 AM IST

ದೇಶದ ಒಳಿತಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಒಟ್ಟಿಗೆ ನೆನೆಯಬೇಕು: ಪ್ರೊ.ಎನ್.ಕೆ. ಲೋಕನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಬಾಬೂಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಬ್ರಿಟಿಷರಿಂದ ಲಾಟಿ ಏಟು ತಿಂದು ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ, ಸ್ವಾತಂತ್ರ್ಯ ನಂತರದ ದೇಶಾಭಿವೃದ್ಧಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರನ್ನು ಮಾತ್ರ ನಾವು ನೆನೆಯುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದ ಒಳಿತಿಗಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ಒಟ್ಟಿಗೆ ನೆನೆಯುವ ಕೆಲಸ ಸಮಾಜದಿಂದ ಆಗಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

ಮೈಸೂರು ವಿವಿ ಮಾನಸಗಂಗೋತ್ರಿಯ ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ ಮೈಸೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನರಾಮ್ ಅವರ 117ನೇ ಜನ್ಮ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬಾಬೂಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಬ್ರಿಟಿಷರಿಂದ ಲಾಟಿ ಏಟು ತಿಂದು ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭ, ಸ್ವಾತಂತ್ರ್ಯ ನಂತರದ ದೇಶಾಭಿವೃದ್ಧಿಯ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರನ್ನು ಮಾತ್ರ ನಾವು ನೆನೆಯುತ್ತೇವೆ. ಆದರೆ, ಇದರ ಹಿಂದೆ ಬೆನ್ನೆಲುಬಾಗಿ ನಿಂತಿದ್ದ ಬಾಬೂಜಿ ಅವರಂತಹ ಮಹನೀಯರನ್ನು ಮರೆತು ಬಿಡುತ್ತೇವೆ. ಈ ರೀತಿ ಆಗಬಾರದು. ಎಲ್ಲಾ ಮಹನೀಯರನ್ನು ಒಟ್ಟಿಗೆ ನೆನೆಯುವ ಕೆಲಸ ಸಮಾಜದಿಂದ ಆಗಬೇಕು ಎಂದು ಅವರು ಹೇಳಿದರು.

ಬಾಬೂಜಿ ಅವರು ವಿದ್ಯಾರ್ಥಿಯಾಗಿದ್ದಾಗಲೇ ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬಟ್ಟೆ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಹಕಾರಗಳನ್ನು ನೀಡುತ್ತಿದ್ದರು. ದಲಿತರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸುವುದು ಅವರ ಮಹಾದಾಸೆಯಾಗಿತ್ತು. ಹೀಗಿಗಾಯೇ, ಅವರು ರಾಜಕೀಯ ರಂಗವನ್ನು ಪ್ರವೇಶಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಹರಿಜನ ಸೇವಾ ಸಂಘದ ಮೂಲಕ ದಲಿತರ ಉದ್ಧಾರಕ್ಕಾಗಿ ಶ್ರಮಿಸಿದರು ಎಂದು ಅವರು ಸ್ಮರಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಸೇನಾನಿಯಾಗಿ, ಸ್ವಾತಂತ್ರ್ಯ ನಂತರ ಅಭಿವೃದ್ಧಿಯ ಹರಿಕಾರರಾಗಿ ಬಾಬೂಜಿ ಶ್ರಮಿಸಿದರು. ಉಳುವವನಿಗೆ ಭೂಮಿ, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಮದ್ಯಪಾನ ನಿಷೇಧ ಮತ್ತು ಅಸ್ಪೃಶ್ಯತಾ ನಿವಾರಣೆ ಮಾಡುವ ಮುಖಾಂತರ ಸದೃಢ ಭಾರತವನ್ನು ಕಟ್ಟುವುದು ಬಾಬೂಜಿ ಅವರ ಕನಸಾಗಿತ್ತು ಎಂದರು.

ಇದೇ ವೇಳೆ ಕರ್ನಾಟಕ ದಲಿತ ಚಳವಳಿಯ ಮೇಲೆ ಬಾಬು ಜಗಜೀವನರಾಮ್ ಅವರ ಪ್ರಭಾವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮುನಿರಾಜು ವಿಶೇಷ ಉಪನ್ಯಾಸ ನೀಡಿದರು.

ಮೈಸೂರು ವಿವಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ಉಪ ಕುಲಸಚಿವ ಎನ್.ಎಸ್. ಚಿದಾನಂದಮೂರ್ತಿ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಆರ್. ತಿಮ್ಮರಾಯಪ್ಪ, ವಿಷಯ ತಜ್ಞ ಎನ್.ಸಿ. ಮುನಿಯಪ್ಪ ಮೊದಲಾದವರು ಇದ್ದರು.