ಸಾರಾಂಶ
ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಅವರ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ.
ಸಂಡೂರು: ಹುಬ್ಬಳ್ಳಿ ನಗರದಲ್ಲಿ ಪ್ರೀತಿ ನಿರಾಕರಿಸಿದ ಯುವತಿ ಅಂಜಲಿ ಅಂಬಿಗೇರ್ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಮೃತಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ತಾಲೂಕು ಗಂಗಾಮತಸ್ಥರ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಮುಖಂಡರು ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಶಿರಸ್ತೇದಾರ್ ಸಿದ್ದಲಿಂಗಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ರಾಘವೇಂದ್ರ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅಂಜಲಿ ಅಂಬಿಗೇರ ಅವರ ಹತ್ಯೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ತನ್ನ ಜೊತೆಗೆ ಬಾರದಿದ್ದರೆ ನೇಹಾ ಹಿರೇಮಠಗೆ ಆದಂತೆ ನಿನಗೂ ಆಗುತ್ತದೆ ಎಂದು ಆರೋಪಿ ಗಿರೀಶ ಸಾವಂತ ಕೆಲ ದಿನಗಳ ಹಿಂದೆ ಅಂಜಲಿ ಅಂಬಿಗೇರ ಅವರಿಗೆ ಬೆದರಿಕೆ ಹಾಕಿದ್ದನಂತೆ. ಈ ವಿಷಯವನ್ನು ಕೊಲೆಯಾದ ಯುವತಿ ತನ್ನ ಅಜ್ಜಿಯ ಬಳಿ ಹೇಳಿಕೊಂಡಿದ್ದಳು. ಇದರಿಂದ ಹೆದರಿದ ಯುವತಿಯ ಅಜ್ಜಿ ಹಾಗೂ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೋಲಿಸರು ಕ್ರಮ ಕೈಗೊಂಡಿದ್ದರೆ, ಈ ದುರ್ಘಟನೆ ನಡೆಯುತ್ತಿರಲಿಲ್ಲ. ಕೊಲೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಆರೋಪಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದರೆ, ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ರೈತ ಮುಖಂಡ ಬಿ.ಎಂ. ಉಜ್ಜಿನಯ್ಯ, ದಲಿತ ಸಂಘರ್ಷ ಸಮಿತಿ ಸಂಚಾಲಕ ಆರ್.ಕೆ. ಹೆಗಡೆ, ಕರವೇ ಮುಖಂಡ ಆನಂದ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜಿ. ನಾಗರತ್ನಮ್ಮ, ತಾಲೂಕು ಗಂಗಾ ಮತಸ್ಥರ ಸಂಘದ ಮುಖಂಡರಾದ ಬಿ. ಸಂತೋಷ್‌ಕುಮಾರ್, ಬಿ.ನರಸಿಂಹರಾಜ್ ಡಿ. ಮಲ್ಲಾಪುರ, ಕುಮಾರ್ ಸಿದ್ದಮ್ಮನಹಳ್ಳಿ, ಎಂ. ಶಿವಕುಮಾರ್, ಬಿ. ಬಸವರಾಜ ದರೋಜಿ, ಬಿ. ಪಂಪಾಪತಿ, ಬಿ ಬಸವರಾಜ ಬನ್ನಿಹಟ್ಟಿ, ಇ. ಬಾಲ ಜೈಸಿಂಗಾಪುರ, ಕುಮಾರ್, ಬಿ. ಶಿವಪ್ಪ, ಉಮೇಶ್, ಪಾಪಯ್ಯ, ಕೆ. ನಾಗೇಶ್, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.