ಸಾರಾಂಶ
ರೈತರು ಹತ್ತಿ ಬೆಳೆದ ಜಮೀನಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಭೇಟಿ
----ಕನ್ನಡಪ್ರಭ ವಾರ್ತೆ ಯಾದಗಿರಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತಿ ಬೆಳೆಗೆ ಕ್ವಿಂಟಾಲ್‌ಗೆ 10 ಸಾವಿರ ರು.ಗಳಂತೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಅವರು ಆಗ್ರಹಿಸಿದ್ದಾರೆ.ತಾಲೂಕಿನ ಮುದ್ನಾಳ ಗ್ರಾಮದ ಹೊರವಲಯದಲ್ಲಿರುವ ರೈತರಾದ ರವಿ ಮತ್ತು ಮಹೇಶ ಅವರ ಹತ್ತಿ ಬೆಳೆದ ಜಮೀನಿಗೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯಲ್ಲಿ ಸಕಾಲದಲ್ಲಿ ಉತ್ತಮವಾಗಿ ಮಳೆಯಾಗಿದೆ. ಈಗಾಗಲೇ ರಸಗೊಬ್ಬರ, ಬಿತ್ತನೆ ಬೀಜಕ್ಕಾಗಿ ಹಾಗೂ ಜಮೀನಿನಲ್ಲಿ ಬೆಳೆದ ಕಳೆ ತೆಗೆಯಲು ರೈತರು ಸಾಲ ಮಾಡಿ ಸಾವಿರಾರು ರುಪಾಯಿಗಳು ಖರ್ಚು ಮಾಡಿದ್ದಾರೆ. ಹಾಗೆಯೇ ರಸಗೊಬ್ಬರ ಮತ್ತು ಕೂಲಿ ಕಾರ್ಮಿಕರ ಬೆಲೆ ಕೂಡ ದುಬಾರಿ ಆಗಿರುವುದರಿಂದ ರೈತರು ಬೆಳೆದ ಬಿಳಿ ಬಂಗಾರದ ಹತ್ತಿ ಬೆಳೆಗೆ ಬೆಂಬಲ ಬೆಲೆ ಕೊಡದಿದ್ದರೆ ಬಡ ರೈತರಿಗೆ ಆರ್ಥಿಕವಾಗಿ ಬಹಳಷ್ಟು ನಷ್ಟವಾಗುವುದರ ಜೊತೆಗೆ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತದೆ ಎಂದರು.ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ವಾಣಿಜ್ಯ ಬೆಳೆಯಾದ ಹತ್ತಿಯಲ್ಲಿ ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಇಳುವರಿ ಮತ್ತು ಮಾರಾಟ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದ ಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತಾಗಿ ರೈತರಿಗೆ ಪ್ರತಿ ಕ್ವಿಂಟಲ್ ಗೆ ಹತ್ತಿಗೆ 10 ಸಾವಿರ ರು.ಗಳಂತೆ ಸರ್ಕಾರದಿಂದ ಖರೀದಿಸಿದ ರೈತರ ಖಾತೆಗೆ ನೇರವಾಗಿ ಹಣ ಜಮಾವಾಗುಂತೆ ನೋಡಿಕೊಳ್ಳಬೇಕು. ಇದರಿಂದ ದಲ್ಲಾಳಿಗಳ ಮತ್ತು ಅಕ್ರಮ ಹತ್ತಿ ಖರೀದಿ ಕೇಂದ್ರಗಳಿಂದ ರೈತರಿಗೆ ಮೋಸವಾಗುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
------24ವೈಡಿಆರ್1: ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದ ಹೊರವಲಯದಲ್ಲಿರುವ ರೈತರಾದ ರವಿ ಮತ್ತು ಮಹೇಶ ಅವರ ಹತ್ತಿ ಬೆಳೆದ ಜಮೀನಿಗೆ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಭೇಟಿ ನೀಡಿದರು.