ಸಾರಾಂಶ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಬ್ಯಾಡಗಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬ್ಯಾಡಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಧರಣಿ ಆರಂಭಿಸಿ ಆನಂತರ ಅಮಿತ ಶಾ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮವರ, ದೇಶದಲ್ಲಿ ಇಂದು ಎಲ್ಲರೂ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತಿರುವುದು ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಮಾತ್ರ ಎಂಬುದು ಸರ್ವಕಾಲಿಕ ಸತ್ಯ. ಇದರ ಬಗ್ಗೆ ಅರಿವಿರದ ಹಾಗೆ ಮಾತನಾಡುತ್ತಿರುವ ಅಮಿತ್ ಶಾ ಪ್ರತಿ ಬಾರಿ ಅಂಬೇಡ್ಕರ್ ಬಗ್ಗೆ ಒಂದಿಲ್ಲೊಂದು ಅಸಂಬದ್ಧ ಹೇಳಿಕೆ ನೀಡಿ ಅವರನ್ನು ಅವಮಾನ ಮಾಡುತ್ತಿದ್ದಾರೆ. ಅಂಥವರು ಗೃಹಮಂತ್ರಿಯಾಗಿ ಉಳಿಯುವುದು ಬೇಡ. ಅವರನ್ನು ಕೂಡಲೇ ವಜಾಗೊಳಿಸುವಂತೆ ಅಗ್ರಹಿಸಿದರು.ಆಶ್ರಯ ಸಮಿತಿ ಅಧ್ಯಕ್ಷ ಮುನಾಷಸಾಬ ಏರೇಶಿಮಿ ಮಾತನಾಡಿ, ವಿಶ್ವದಲ್ಲಿಯೇ ಅತ್ಯುನ್ನತ ಸಂವಿಧಾನವನ್ನು ರಚಿಸಿ, ಇಡೀ ದೇಶದ ಎಲ್ಲ ವರ್ಗದ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಟ್ಟ ಡಾ. ಬಿ.ಆರ್. ಅಂಬೇಡ್ಕರ್ ಜ್ಞಾನದ ಸಂಕೇತವಾಗಿರುವ ವಿಶ್ವನಾಯಕ. ಅಂಥವರನ್ನು ನೆನೆಯದೇ ಮತ್ತಿನ್ಯಾರನ್ನು ನೆನೆಯಬೇಕು ಎಂಬುದನ್ನು ಗೃಹಮಂತ್ರಿ ಅಮಿತ ಶಾ ತಿಳಿಸಲಿ. ಅಪ್ರಬುದ್ಧರಂತೆ ಮಾತನಾಡುತ್ತಿರುವ ಅವರನ್ನು ಮಂತ್ರಿಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿಯ ರವಿ ಹುಣಸಿಮರದ, ರವಿ ಪೂಜಾರ, ಬಸವರಾಜ ತಡಸದ, ಜೈಭೀಮ ರಾರಾವಿ, ಮಜಿದ್ ಮುಲ್ಲಾ, ನಜೀರಹಮ್ಮದ ಶೇಖ್, ಗಿರೀಶ ಇಂಡಿಮಠ, ವಿಜಯ ಕಾಟೇನಹಳ್ಳಿ, ಮಂಜುನಾಥ ಗಂಗಮ್ಮನವರ, ಸುಮಂಗಲಾ ರಾರಾವಿ, ಪುಷ್ಪಾ ಕಾಕೋಳ, ಹನುಮಂತ ಹಣಸಿಮರದ, ಅನಿಲ್ ಪೂಜಾರ, ಮಾಲತೇಶ ಪೂಜಾರ, ವಿಕಾಸ ಗಂಗಮ್ಮನವರ ಭಾಗವಹಿಸಿದ್ದರು.