ಸಾರಾಂಶ
ಜಮೀರ್ ಅಹಮ್ಮದ್ ಖಾನ್ ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುತ್ತಾರೆ ಎಂಬ ದುರಹಂಕಾರದ ಮಾತುಗಳನ್ನಾಡಿದ್ದಾರೆ. ಅವರ ನಾಲಿಗೆಯೇ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಮಾತನಾಡಿರುವ ರಾಜ್ಯ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಆಗ್ರಹಿಸಿ, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನ ಗಾಂಧಿ ಚೌಕದಲ್ಲಿ ಮಂಗಳವಾರ ಪ್ರತಿಭಟಿಸಿದರು.ಜೆಡಿಎಸ್ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ಜಮಾಯಿಸಿದ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹಮ್ಮದ್ ಖಾನ್ ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುತ್ತಾರೆ ಎಂಬ ದುರಹಂಕಾರದ ಮಾತುಗಳನ್ನಾಡಿದ್ದಾರೆ. ಅವರ ನಾಲಿಗೆಯೇ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯ ಸರ್ಕಾರ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಜಮೀರ್ ಅವರು ತಮ್ಮ ನಡೆಯನ್ನು ತಿದ್ದಿಕೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದರು.ಈ ವೇಳೆ ಮಾಜಿ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಜಮೀರ್ ಅಹಮ್ಮದ್ ಹೇಳಿಕೆ ಖಂಡನಾರ್ಹ. ಈ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ವಕ್ಫ್ ಸಭೆಗೆ ಜಮೀರ್ ಅಹ್ಮದ್ ಅವರು ಪಾಲ್ಗೊಂಡಿದ್ದಾರೆಂಬ ಮಾಹಿತಿ ತಿಳಿದು ಧರಣಿ ಮುಗಿದ ಬಳಿಕ ಮುತ್ತಿಗೆ ಹಾಕಲು ಮುಂದಾಗಿದ್ದರು. ಆದರೆ, ಜಮೀರ್ ಅಹಮದ್ ಖಾನ್ ಅವರು ಕುಮಾರಸ್ವಾಮಿ ಅವರ ಬಗ್ಗೆ ಹೇಳಿದ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆಂದು ತಿಳಿಸಿದ್ದರಿಂದ ಮುತ್ತಿಗೆ ಕೈ ಬಿಟ್ಟರು.ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ರಾಜ್ಯ ಕಾರ್ಯದರ್ಶಿ ಎಚ್.ಕೆ. ರಾಮು, ಮಾಜಿ ಉಪ ಮೇಯರ್ ಕೃಷ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆಂಪಣ್ಣ, ಎಂ.ಎಸ್. ಶೋಭಾ, ಭಾಗ್ಯ ಮಾದೇಶ್, ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ, ಮುಖಂಡರಾದ ಪ್ರಕಾಶ್, ರಾಮು, ಪವನ್ ಒಡೆಯರ್, ಮಧುವನ ಚಂದ್ರು, ಮಂಜುನಾಥ್, ರವಿಚಂದ್ರೇಗೌಡ, ಸಿ.ಜೆ. ದ್ವಾರಕೀಶ್, ಆನಂದಗೌಡ, ಫಾಲ್ಕನ್ ಬೋರೇಗೌಡ, ಪ್ರಶಾಂತ್, ಮಮತಾ ಮೊದಲಾದವರು ಇದ್ದರು.