ಸಾರಾಂಶ
ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ಅನುದಾನವನ್ನು ತರಾತುರಿಯಲ್ಲಿ ವಿತರಿಸಿ, ತನ್ನ ಪಾಲಿನ ಬರ ಪರಿಹಾರವನ್ನು ವಿತರಣೆ ಮಾಡದೇ ರೈತರನ್ನು ದಾರಿ ತಪ್ಪಿಸಿದರೆ ರಾಜ್ಯ ಸರಕಾರದ ರೈತರ ನಿರೋಧಿ ನೀತಿ ವಿರುದ್ಧ ಬೀದಿಗಿಳಿದು ಹೋರಾಟ ಅನಿವಾರ್ಯ
ಹಾನಗಲ್ಲ: ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ಅನುದಾನವನ್ನು ತರಾತುರಿಯಲ್ಲಿ ವಿತರಿಸಿ, ತನ್ನ ಪಾಲಿನ ಬರ ಪರಿಹಾರವನ್ನು ವಿತರಣೆ ಮಾಡದೇ ರೈತರನ್ನು ದಾರಿ ತಪ್ಪಿಸಿದರೆ ರಾಜ್ಯ ಸರಕಾರದ ರೈತರ ನಿರೋಧಿ ನೀತಿ ವಿರುದ್ಧ ಬೀದಿಗಿಳಿದು ಹೋರಾಟ ಅನಿವಾರ್ಯ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರವಿದೆ. ರೈತರು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ರೈತರಿಗೆ ಬರ ಪರಿಹಾರ ವಿತರಿಸಬೇಕು ಎಂದರು.ಈ ಹಿಂದೆ ರೈತರಿಗೆ ಕೇವಲ ಎರಡು ಸಾವಿರ ಪರಿಹಾರ ವಿತರಿಸಿದ್ದ ರಾಜ್ಯ ಸರಕಾರ ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು.
ಬರ ನಿರ್ವಹಣೆ ಪರಿಹಾರದ ಬಗ್ಗೆ ಈ ಲೋಕಸಭೆ ಚುನಾವಣೆಯಲ್ಲಿ ಚರ್ಚೆ ನಡೆದಿರುವುದು ಕೇವಲ ರಾಜಕೀಯ ಲಾಭಕ್ಕೆ ಎಂದೆನಿಸುತ್ತಿದೆ. ಈಗ ಕೇಂದ್ರದಿಂದ ಬರ ಪರಿಹಾರಕ್ಕೆ ಅನುದಾನ ಬಿಡುಗಡೆಗೊಂಡಿದೆ. ಈ ಹಿಂದೆ ರಾಜ್ಯ ಸರಕಾರ ವಿತರಿಸಿದ್ದ ಎರಡು ಸಾವಿರ ರು. ಪರಿಹಾರದ ಲೆಕ್ಕ ಮುರಿದುಕೊಂಡು ಪರಿಹಾರ ವಿತರಣೆ ಮಾಡಿರುವುದು ರಾಜ್ಯ ಸರಕಾರದ ತಂತ್ರಗಾರಿಕೆ ಆಗಿದೆ. ಇದನ್ನು ಒಪ್ಪಲೂ ಸಾಧ್ಯವಿಲ್ಲ.
ಇದು ಸರಿಯಾದ ವಿಚಾರವೂ ಅಲ್ಲ ಎಂದು ಹರಿಹಾಯ್ದರು. ಕೇಂದ್ರದ ಬರ ಪರಿಹಾರದಷ್ಟೆ ಮೊತ್ತವನ್ನು ರಾಜ್ಯ ಸರಕಾರ ರೈತರಿಗೆ ವಿತರಿಸಬೇಕು. ಕೇಂದ್ರ ಸರಕಾರದ ಕಡೆಗೆ ಕೈ ತೋರಿಸದೆ ತನ್ನ ಪಾಲಿನ ಪರಿಹಾರವನ್ನು ಈಗಾಗಲೇ ರಾಜ್ಯ ಸರಕಾರ ನೀಡಬೇಕಾಗಿತ್ತು. ಕೇವಲ ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ, ನ್ಯಾಯಾಲಯಕ್ಕೂ ಹೋಗಿ, ಪರಿಹಾರ ದೊರೆತ ಮೇಲೆ ಕೇವಲ ಕೇಂದ್ರ ಪರಿಹಾರ ಕೊಟ್ಟು ರಾಜ್ಯ ಸರಕಾರದ ಪರಿಹಾರವನ್ನು ಕೊಡದೇ ಇರುವುದು ರೈತರ ಪರವಾಗಿ ರಾಜ್ಯ ಸರಕಾರ ಇಲ್ಲ ಎಂಬುದನ್ನು ಸಾಬೀತು ಮಾಡುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದ ಅವಧಿಯಲ್ಲಿ ಮಾರ್ಗಸೂಚಿ ಅನುಸರಿಸಿ ಪರಿಹಾರ ವಿತರಿಸಲಾಗಿತ್ತು ಎಂಬುದನ್ನು ಸಿಎಂ ಸಿದ್ದರಾಮಯ್ಯ ಸರಕಾರ ಗಣನೆಗೆ ತೆಗೆದುಕೊಳ್ಳಲಿ. ರಾಜ್ಯ ಸರಕಾರ ಕೊಟ್ಟ ಪರಿಹಾರದ 2 ಸಾವಿರ ರು.ಗಳನ್ನು ಕತ್ತರಿಸಿ ಕೇಂದ್ರ ಸರಕಾರದ ಪರಿಹಾರ ಧನ ನೀಡಿರುವುದು ರಾಜ್ಯ ಸರಕಾರದ ರೈತ ನಿರೋಧಿ ನೀತಿಯಾಗಿದೆ ಎಂದು ಕಿಡಿ ಕಾರಿದರು.ರೈತರು ಪರಿಹಾರಕ್ಕಾಗಿ ಅರ್ಜಿ ಹಾಕಿಲ್ಲ ಎಂದು ಹೇಳಲಾಗುತ್ತಿದೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರಿಂದ ೧೮ ಸಾವಿರ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಹಾವೇರಿಗೆ ಭೇಟಿ ನೀಡದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿಪತ್ರ ಸಲ್ಲಿಸಲಾಗಿತ್ತು. ಕೃಷಿಗೆ ಸಂಬಂಧಿತ ಅನುದಾನ ಯಾವುದೇ ಇಲಾಖೆಯಿಂದ ಬಿಡುಗಡೆಗೊಳ್ಳುತ್ತಿಲ್ಲ. ಹನಿ ನೀರಾವರಿ ಸಬ್ಸಿಡಿ ಮುಂದುವರೆಸುತ್ತಿಲ್ಲ. ಅಡಕೆ ಬೆಳೆ ಹಾನಿಗೆ ಪರಿಹಾರ ಸಿಕ್ಕಿಲ್ಲ ಎಂದು ಆಪಾದಿಸಿದರು.ರೈತ ಸಂಘದ ಪ್ರಮುಖರಾದ ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ಸುಜಾತಾ ನಂದಿಶೆಟ್ಟರ ಮತ್ತಿತರರು ಇದ್ದರು.