ಮಂಡ್ಯ ನಗರದ ಗುತ್ತಲು ಸ.ನಂ. ೪೦೫/೪ರಲ್ಲಿ ೦.೩೯ ಗುಂಟೆ ಸರ್ಕಾರಿ ಭೂಮಿ ಇದೆ. ಅಕ್ರಮ ಒತ್ತುವರಿ ತೆರವು ಮಾಡಿಸಿ, ನಿವೇಶನ ಇಲ್ಲದವರಿಗೆ ನಿವೇಶನ ರಹಿತರಿಗೆ ಮಾತ್ರ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಗುತ್ತಲು ಬಡಾವಣೆಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ ಜನಾಂಗದ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ವಿಶ್ವೇಶ್ವರ ಪ್ರತಿಮೆ ಬಳಿ ಸೇರಿದ ಕಾರ್ಯಕರ್ತರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು. ಶ್ರೀಮಾಸ್ತಮ್ಮ ದೇವಸ್ಥಾನದ ಗದ್ದೆ ಬಯಲಿನಲ್ಲಿ ವಾಸಿಸುತ್ತಿದ್ದ ಆದಿ ಕರ್ನಾಟಕ ಸಮುದಾಯದವರನ್ನು ಮಂಡ್ಯ ಉಪ ವಿಭಾಗಾಧಿಕಾರಿಗಳ ವಿಲೇಜ್ ಸಿಪ್ಟಿಂಗ್ ಆದೇಶದಂತೆ ಗುತ್ತಲು ಗ್ರಾಮದ ಸ.ನಂ. ೪೦೫/೪ರಲ್ಲಿ ೨೪ ಗುಂಟೆ, ೪೦೫/೮ರಲ್ಲಿ ೨೭ ಗುಂಟೆ, ೪೦೬/೧ರಲ್ಲಿ ೧.೧೪ ಎಕರೆ, ೪೦೬/೨ರಲ್ಲಿ ೧.೩೪ ಎಕರೆ ಹಾಗೂ ೪೦೬/೩ರಲ್ಲಿ ೧.೦೩ ಎಕರೆ ಒಟ್ಟು ೫.೦೫ ಎಕರೆ ಮೈಸೂರು ರಾಜ್ಯ ಸರ್ಕಾರಿ ಜಮೀನನ್ನು ಆದಿಕರ್ನಾಟಕ ಜನಾಂಗಕ್ಕೆ ಮೀಸಲಿರಿಸಿ ನಿವೇಶನಗಳನ್ನು ನೀಡಲಾಗಿತ್ತು. ಆದರೆ, ಮೂಲ ಮಂಜೂರಾತಿ ಹಕ್ಕುಪತ್ರಗಳನ್ನು ವಿತರಿಸದೆ ನಗರಸಭೆಯವರು ತಾತ್ಸಾರ ಮಾಡಲಾಗಿದೆ ಎಂದು ಆರೋಪಿಸಿದರು.

ಶಾಸಕ ಪಿ.ರವಿಕುಮಾರ್ ಅವರು ಆದಿಕರ್ನಾಟಕ ಕಾಲೋನಿಯಲ್ಲಿ ಜನಾಂಗಕ್ಕೆ ಮೀಸಲಾಗಿದ್ದ ನಿವೇಶನ ಪ್ರದೇಶವನ್ನು ಇಲ್ಲಿಯೇ ಸ್ವಾಧೀನಾನುಭವದಲ್ಲಿರುವ ಮತ್ತು ದ್ವಿಗುಣಗೊಂಡ ಕುಟುಂಬಗಳಿಗೆ ಖಾಲಿ ನಿವೇಶನಗಳನ್ನು ವಿತರಿಸಿ ಹಕ್ಕಪತ್ರ ವಿತರಿಸುವಂತೆ ನಿರ್ದೇಶನ ನೀಡದೆ, ಅಕ್ರಮ ಮತ್ತು ಅವೈಜ್ಞಾನಿಕವಾಗಿ ಈ ನಿವೇಶನ ಭೂಮಿಯನ್ನು ಬೇರೆ ಬೇರೆ ಪ್ರದೇಶದ ಜನರಿಗೆ ಮನೆ ನೀಡುವ ತಂತ್ರ ರೂಪಿಸಿ, ಮೂಲನಿವಾಸಿ ಕುಟುಂಬಗಳಿಗೆ ಅನ್ಯಾಯ ಮಾಡಲು ಪ್ರಯತ್ನಿಸಿರುವುದನ್ನು ಖಂಡಿಸಿದರು.

ಮಂಡ್ಯ ನಗರದ ಗುತ್ತಲು ಸ.ನಂ. ೪೦೫/೪ರಲ್ಲಿ ೦.೩೯ ಗುಂಟೆ ಸರ್ಕಾರಿ ಭೂಮಿ ಇದೆ. ಅಕ್ರಮ ಒತ್ತುವರಿ ತೆರವು ಮಾಡಿಸಿ, ನಿವೇಶನ ಇಲ್ಲದವರಿಗೆ ನಿವೇಶನ ರಹಿತರಿಗೆ ಮಾತ್ರ ಹಂಚಿಕೆ ಮಾಡಿ, ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿದರು.

ಸಂಘದ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಬಿ.ಆನಂದ್, ಮುಖಂಡರಾದ ಜಿ.ಸುಶ್ಮಿತ, ಮುತ್ತುರಾಜು, ಸುರೇಶ್‌ಕುಮಾರ್, ಕರಿಯಪ್ಪ, ಪುಟ್ಟಲಿಂಗಯ್ಯ, ಶಶಿರೇಖಾ ಸೇರಿದಂತೆ ಇತರರಿದ್ದರು.