ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಅಣೆಕಟ್ಟೆ ಮುಖ್ಯ ಕಾಲುವೆ, ಗೇಟ್‌ಗಳನ್ನು ದುರಸ್ತಿಪಡಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಗೆ ಸಂಘದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ ಇತರರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ತಾಲೂಕಿನ ಕುರ್ಕಿ ಕಾಲುವೆಯಿಂದ ಮತ್ತಪ್ಪನ ಕ್ಯಾಂಪ್‌ವರೆಗೂ ಭದ್ರಾ ನಾಲೆಯಲ್ಲಿ ತುಂಬಿರುವ ಹೂಳು ತೆಗೆಸುವಂತೆ, ಲೋಕಿಕೆರೆ, ಗೋಪನಾಳ್ ಭಾಗದ 3 ಗೇಟ್ ದುರಸ್ತಿಪಡಿಸುವಂತೆ ಮನವಿ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಗುಮ್ಮನೂರು ಬಸವರಾಜ, ಭದ್ರಾ ನಾಲೆಯಲ್ಲಿ ಹೂಳು ತುಂಬಿರುವುದು, ಗೇಟ್ ಹಾಳಾಗಿರುವುದರಿಂದ ಹೆಚ್ಚಿನ ನೀರು ಲೋಕಿಕೆರೆ ಭಾಗಕ್ಕೆ ಹೋಗುತ್ತಿದೆ. ಇದರಿಂದಾಗಿ ಕೋಲ್ಕುಂಟೆ ಇತರೆ ಭಾಗದ ಅಚ್ಚುಕಟ್ಟು ರೈತರಿಗೆ ತೊಂದರೆಯಾಗುತ್ತಿದೆ. ಸತತ 2 ವರ್ಷಗಳ ತೀವ್ರ ಬರದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ನಾಲೆಯಲ್ಲೂ ಹೂಳು ತುಂಬಿದ್ದರಿಂದ ನೀರು ಸಹ ಅಚ್ಚುಕಟ್ಟು ಪ್ರದೇಶಕ್ಕೆ ಸರಿಯಾಗಿ ತಲುಪುತ್ತಿಲ್ಲ. ನಿಗದಿತ ಪ್ರಮಾಣದ ನೀರು ಆಯಾ ಭಾಗಕ್ಕೆ ತಲುಪದ ಸ್ಥಿತಿ ಇದೆ ಎಂದು ದೂರಿದರು.ಅಚ್ಚುಕಟ್ಟು ರೈತರು, ರೈತ ಸಂಘಟನೆಗಳು ಸಾಕಷ್ಟು ಸಲ ನೀರಾವರಿ ಇಲಾಖೆ, ಸಂಬಂಧಿಸಿದ ಎಂಜಿನಿಯರ್, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾರೊಬ್ಬರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ತಕ್ಷಣವೇ ನಾಲೆಯಲ್ಲಿ ತುಂಬಿರುವ ಹೂಳು ತೆರವು ಮಾಡಿಸಬೇಕು. ಕುರ್ಕಿಯಿಂದ ಮುತ್ತಪ್ಪನ ಕ್ಯಾಂಪ್‌ನವರೆಗೆ 4 ಪೈಪ್ ಹಾಳಾಗಿದ್ದು, ನೀರು ಸೋರಿಕೆಯಾಗುತ್ತಿರುವುದನ್ನು ತಡೆದು, ಅಚ್ಚುಕಟ್ಟಿಗೆ ತಲುಪಿಸುವ ಹೊಣೆ ಹೊರಬೇಕು. ತಕ್ಷಣವೇ ಹೊಸದಾಗಿ ಪೈಪ್‌ಲೈನ್ ಅಳವಡಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.
ಚಿಕ್ಕತೊಗಲೇರಿ ಕ್ಯಾಂಪ್ ನಲ್ಲಿ ಸಾರ್ವಜನಿಕರ ಬಸ್ ನಿಲ್ದಾಣ ಮಾಡಬೇಕು. ಸಾಕಷ್ಟು ಸಲ ಮನವಿ ಮಾಡಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಇದರಿಂದಾಗಿ ರೈತರು, ಗ್ರಾಮೀಣರು, ವಯೋವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೋಗಿಗಳು, ವಿಕಲಚೇತನರಿಗೆ ತೀವ್ರ ಅನ್ಯಾಯವಾಗುತ್ತಿದೆ. ತಕ್ಷಣವೇ ಎಲ್ಲರಿಗೂ ಅನುಕೂಲವಾಗುವಂತೆ ಅಲ್ಲೊಂದು ಬಸ್ಸು ನಿಲ್ದಾಣ ನಿರ್ಮಿಸಿಕೊಡಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಶೀಘ್ರವೇ ದಾವಣಗೆರೆ-ಸಂತೇಬೆನ್ನೂರಿಗೆ ಸಂಪರ್ಕ ಕಲ್ಪಿಸುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.ಸಂಘಟನೆ ಮುಖಂಡರಾದ ಕೋಲ್ಕುಂಚೆ ಉಚ್ಚೆಂಗೆಪ್ಪ, ಕಿತ್ತೂರು ಕೆ.ಎಸ್.ಹನುಮಂತಪ್ಪ, ಪರಶುರಾಮ ಚಿಕ್ಕತೊಗಲೇರಿ, ಟಿ.ಪಿ.ಚಂದ್ರಪ್ಪ ಚಿಕ್ಕತೊಗಲೇರಿ, ನೀರ್ಥಡಿ ತಿಪ್ಪೇಶ, ಮಲ್ಲಿಕಾರ್ಜುನ ಚಿಕ್ಕತೊಗಲೇರಿ, ಚಿಕ್ಕಬೂದಿಹಾಳ ಭಗತ್ ಸಿಂಹ, ಕೋಲ್ಕುಂಟೆ ರಂಗಸ್ವಾಮಿ, ಜಿ.ಹಾಲೇಶ, ತಿಪ್ಪೇಸ್ವಾಮಿ, ಸುರೇಶ, ಸುನಿಲಕುಮಾರ ಹರಿಹರ, ಬಸವರಾಜಪ್ಪ ಇತರರು ಇದ್ದರು.