ಕುಷ್ಟಗಿ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕುಷ್ಟಗಿ: ಕುಷ್ಟಗಿ ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಶಾಸಕ ದೊಡ್ಡನಗೌಡ ಪಾಟೀಲ ನೇತೃತ್ವದಲ್ಲಿ ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಬಂಡಿಗಳೊಂದಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ವೀರಯೋಧ ಮಲ್ಲಯ್ಯ ವೃತ್ತ, ಮಾರುತಿ ವೃತ್ತ, ಕನಕದಾಸ ವೃತ್ತ ಹಾಗೂ ಬಸವೇಶ್ವರ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಬಂದ್ ಮಾಡಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ, ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕುಷ್ಟಗಿಯನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸಿದರು. ಪ್ರತಿಭಟನೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಕುಷ್ಟಗಿ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ಇಲ್ಲ. ಮಳೆಯನ್ನೇ ನಂಬಿ ಬದುಕುವ ರೈತರೇ ಹೆಚ್ಚಿದ್ದಾರೆ. ಆರಂಭಿಕ ಮಳೆಯಲ್ಲಿ ರೈತರು ಬಿತ್ತನೆ ಮಾಡಿದರು. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಎರಡು ಬಾರಿ ಬಿತ್ತನೆ ಮಾಡಬೇಕಾಯಿತು. ಇದೀಗ ಮತ್ತೆ ಮಳೆ ಕೈಕೊಟ್ಟಿದೆ ಎಂದರು.

ಮುಖ್ಯಮಂತ್ರಿಗೆ ಈಗಾಗಲೇ ಬರ ಘೋಷಣೆ ಕುರಿತು ಮನವಿ ಮಾಡಲಾಗಿದೆ. ಮೊದಲ ಹಾಗೂ ಎರಡನೇ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲೂ ಕುಷ್ಟಗಿಯನ್ನು ಸೇರಿಸಿಲ್ಲ. ಇತರ ತಾಲೂಕುಗಳನ್ನು ಬರ ಘೋಷಣೆ ಮಾಡಲು ಮಳೆ ವರದಿ ಕೇಳದ ಸರ್ಕಾರಕ್ಕೆ ಕುಷ್ಟಗಿಗೆ ಮಾತ್ರ ಮಳೆ ವರದಿ ಬೇಕಾಗಿದೆ ಎಂದು ಆಕ್ಷೇಪಿಸಿದರು.

ತಕ್ಷಣ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ, ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಗೋಶಾಲೆ ಆರಂಭಿಸಬೇಕು. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ತಾಲೂಕಿನ ಕನಿಷ್ಠ 15 ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೊಳ್ಳಬೇಕು. ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಸೆ. 21ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಮುಂದುವರಿಯಲಿದೆ. ಇದು ಕೊನೆಯ ಎಚ್ಚರಿಕೆ ಎಂದು ಹೇಳಿದರು.

ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಿದ್ದರೂ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಲ್ಲ. ರೈತರಿಗೆ ತೊಂದರೆ ನೀಡದೆ ಕೂಡಲೇ ಬರ ಘೋಷಿಸಬೇಕು. ತಾಲೂಕಿನಲ್ಲಿ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮುನ್ನ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಮುಖಂಡ ಡಾ. ಬಸವರಾಜ್ ಕ್ಯಾವಟರ್ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಮಳೆಯ ಕೊರತೆ ಇದೆ. ಕೊಪ್ಪಳ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ. ಬೆಳೆ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಬರ ಘೋಷಿಸಬೇಕು. ಕುಷ್ಟಗಿಯಲ್ಲಿ ವಿರೋಧ ಪಕ್ಷದ ಶಾಸಕರಿದ್ದಾರೆ ಎಂಬ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂಬ ಅನುಮಾನ ರೈತರಲ್ಲಿ ಮೂಡಿದೆ ಎಂದು ಆರೋಪಿಸಿದರು.

ರೈತ ಮೋರ್ಚಾ ಅಧ್ಯಕ್ಷ ಅಶೋಕ ಗುಡದಳ್ಳಿ, ಬಸವರಾಜ ಹಳ್ಳೂರು ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಬಾದಾಮಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ್, ದೇವೆಂದ್ರಪ್ಪ ಬಳೂಟಗಿ, ಕೆ. ಮಹೇಶ, ಶೈಲಜಾ ಬಾಗಲಿ, ಕಲ್ಲೇಶ ತಾಳದ, ಲಾಡಸಾಬ ಕೊಳ್ಳಿ, ದೊಡ್ಡಬಸವ ಸುಂಕದ, ವಿಜಯ ದೇಸಾಯಿ, ಶುಖಮುನಿ ಕೊರಡಕೇರಾ ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಸಲ್ಲಿಸಿದ ಮನವಿಯನ್ನು ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಸ್ವೀಕರಿಸಿದರು.