ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ ಜಿಲ್ಲೆಯ ಜನಾರೋಗ್ಯವನ್ನು ಖಾತ್ರಿಪಡಿಸುವಂತೆ ಆಗ್ರಹಿಸಿ ಇನ್ನು ಸಾರ್ವಜನಿಕರಿಗೆ ಸೇವೆ ಸಿಗದ ಹಾಸನದ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಮುಂದೆ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನಾ ಸಭೆ ನಡೆಸಿದರು.ಇದೆ ವೇಳೆ ಸಾಮಾಜಿಕ ಹೋರಾಟಗಾರರು ಹಾಗೂ ಸಾಹಿತಿ ರೂಪ ಹಾಸನ್, ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ ಇತರರು ಮಾತನಾಡಿ, ಕಳೆದ ತಿಂಗಳಿನಿಂದೀಚೆಗೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಎಲ್ಲರನ್ನೂ ಆತಂಕಕ್ಕೆ ಈಡು ಮಾಡಿವೆ. ಅದರಲ್ಲೂ ಎಳೆಯರ ಮತ್ತು ಯುವಜನರ ಹಠಾತ್ ಸಾವು ತೀವ್ರ ಆತಂಕವನ್ನು ಸೃಷ್ಟಿಮಾಡಿದೆ. ಸರ್ಕಾರ ಈಗಾಗಲೇ ಈ ಹಠಾತ್ ಸಾವುಗಳ ಕುರಿತು ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸಿ ವರದಿ ತರಿಸಿಕೊಂಡಿದೆ. ಹಾಗೂ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ತಜ್ಞರ ಸಮಿತಿಯ ವರದಿಯು ಹಠಾತ್ ಸಾವುಗಳಿಗೆ ಜೀವನ ಶೈಲಿ, ಆಹಾರ ಪದ್ದತಿ, ಪರಿಸರ ಮಾಲಿನ್ಯ ಮತ್ತು ಕೋವಿಡೋತ್ತರ ಪರಿಸ್ಥಿತಿಯ ಕಾರಣಗಳತ್ತ ಬೊಟ್ಟು ಮಾಡಿದೆ. ಈ ಸ್ಪರ್ಧಾತ್ಮಕ ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ತಾರತಮ್ಯಗಳು ಮತ್ತು ಕೌಟುಂಬಿಕ ಒತ್ತಡಗಳು, ಇಂತಹ ಗಂಭೀರವಾದ ಪರಿಣಾಮಗಳಿಗೆ ಕಾರಣವಾಗುತ್ತಿವೆ. ಈ ಎಲ್ಲಾ ಪರಿಣಾಮಗಳಿಗೆ ಕೇವಲ ಜನರ ವೈಯಕ್ತಿಕ ಮಟ್ಟದ ಕಾರಣಗಳು ಮಾತ್ರವೇ ಆಗಿರದೆ ಪ್ರಮುಖವಾಗಿ ಅವುಗಳು ಸಾಮಾಜಿಕ ಆರ್ಥಿಕ ಕಾರಣಗಳಾಗಿವೆ. ಈ ಸಾಮಾಜಿಕ ಆರ್ಥಿಕ ಕಾರಣಗಳಿಗೆ ಮೊದಲು ಪರಿಹಾರ ದೊರಕಿಸಿಕೊಡುವ ಕೆಲಸ ಯಾವುದೇ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ದೂರಿದರು. ಶಸ್ತ್ರಚಿಕಿತ್ಸಕ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಮಕ್ಕಳ ತಜ್ಞ ಮತ್ತು ಅರಿವಳಿಕೆ ತಜ್ಞರು ಇರಬೇಕು. ಆದರೆ, ಹಾಸನ ಜಿಲ್ಲೆಯ ಹಲವು ಸಿ.ಎಚ್.ಸಿ.ಗಳಲ್ಲಿ ಈ ಬಹುತೇಕ ತಜ್ಞರ ಹುದ್ದೆಗಳು ಖಾಲಿ ಇವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದ್ದರೂ, ಖಾಯಂ ಹುದ್ದೆಗಳು ಖಾಲಿ ಇರುವುದು ಸೇವೆಯ ಮೇಲೆ ಪರಿಣಾಮ ಬೀರುತ್ತಿದೆ. ಸಿಬ್ಬಂದಿ ಮತ್ತು ಸಂಪನ್ಮೂಲಗಳ ಕೊರತೆಯಿಂದಾಗಿ, ಎಲ್ಲಾ ಪಿ.ಎಚ್.ಸಿ. ಗಳಲ್ಲಿ ೨೪x೭ ತುರ್ತು ಮತ್ತು ಹೆರಿಗೆ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವುದು ಸವಾಲಾಗಿದೆ. ಕೆಲವು ಸಿ.ಎಚ್.ಸಿ.ಗಳಲ್ಲಿ ಎಕ್ಸ್-ರೇ ಯಂತ್ರಗಳು ಇದ್ದರೂ, ಅವುಗಳನ್ನು ನಿರ್ವಹಿಸಲು ರೇಡಿಯೋಗ್ರಾಫರ್ ಇಲ್ಲದಿರುವುದು ಅಥವಾ ಯಂತ್ರಗಳು ಕೆಟ್ಟಿರುವುದು ವರದಿಯಾಗಿದೆ ಎಂದು ದೂರಿದರು.
ವೈದ್ಯಕೀಯ ಸಿಬ್ಬಂದಿ ಕೊರತೆ:ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಟ್ಟು ಮಂಜೂರಾದ ೩೪೦ ವೈದ್ಯರ ಹುದ್ದೆಗಳಲ್ಲಿ ೧೧೭ ವೈದ್ಯರ ಹುದ್ದೆಗಳು ಖಾಲಿಯಿವೆ. ಅವುಗಳಲ್ಲಿ ೩೬ ತಜ್ಞ ವೈದ್ಯರು, ೨೨ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ಮತ್ತು ೫೨ ಕರ್ತವ್ಯನಿರತ ವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ ೧೮೫೬ ವೈದ್ಯಕೀಯ ಸಿಬ್ಬಂದಿ ಹುದ್ದೆಗಳಲ್ಲಿ ೮೧೫ ವೈದ್ಯಕೀಯ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಒಟ್ಟು ಮಂಜೂರಾದ ೮೨೪ ವೈದ್ಯಕೀಯೇತರ ಸಿಬ್ಬಂದಿಗಳ ಹುದ್ದೆಗಳಲ್ಲಿ ೬೬೪ ವೈದ್ಯಕೀಯೇತರ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಹಾಗೂ ಇಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಇಡೀ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೊಳಗೆ ಕೇವಲ ಒಬ್ಬರ ಮಾತ್ರ ಹೃದ್ರೋಗ ತಜ್ಞರು (ಕಾರ್ಡಿಯಾಲಜಿಸ್ಟ್) ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದು ಜಿಲ್ಲೆಯ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಸುತ್ತದೆ ಎಂದರು.
ಹಕ್ಕೋತ್ತಾಯಗಳು:ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಬೇಕಾದ ಕನಿಷ್ಟ ೫೦ ಕೋಟಿ ರು. ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಕಾರ್ಯಾರಂಭ ಮಾಡಬೇಕು. ಹೃದ್ರೋಗ, ಮೂತ್ರಪಿಂಡ, ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.
ಕೀಟನಾಶಕ ಬಳಕೆ ನಿಯಂತ್ರಿಸಿ:ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಥೂಲಕಾಯ ಮತ್ತಿತರೆ ಪ್ರಾಥಮಿಕ ವೈಧ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ೬ ತಿಂಗಳಿಗೊಮ್ಮೆ ಮಾಡಿಸಸಬೇಕು. ಯಾವುದೇ ಹಾನಿಕಾರಕ ರಾಸಾಯನಿಕ, ಕೃತಕ ಮತ್ತು ಕಲುಷಿತ ಎಣ್ಣೆ ಮತ್ತು ಕೃತಕ ಬಣ್ಣಗಳು ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈಗಾಗಲೇ ನಿಷೇಧಿಸಲ್ಪಟ್ಟ ಅಪಾಯಕಾರಿ ಕೀಟನಾಶಕಗಳನ್ನು ಶುಂಠಿ ಸೇರಿದಂತೆ ವಿವಿಧ ಬೆಳೆಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದಾಗುವ ದೂರಗಾಮಿ ಕೆಟ್ಟ ಪರಿಣಾಮಗಳನ್ನು ತಡೆಯಲು ಕೃಷಿಯಲ್ಲಿ ಅಪಾಯಕಾರಿ ಕೀಟನಾಶಕಗಳು ಮತ್ತು ರಾಸಾಯನಿಕಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯ ಮೇಲೆ ನಿಯಂತ್ರಣ ಹೇರಬೇಕು.ಈ ಬೇಡಿಕೆಗಳು ಈಡೇರುವವರೆಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘ ಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್, ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಆರ್. ವಿಜಯಕುಮಾರ್, .ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ವಕೀಲ ಅನ್ಷಾದ್ ಪಾಳ್ಯ, ಎಫ಼್.ಐ ಜಿಲ್ಲಾ ಕಾರ್ಯದರ್ಶಿ ಎಸ್. ರಮೇಶ್, ಸಾಮಾಜಿಕ ಕಾರ್ಯಕರ್ತ ಮಲ್ನಾಡ್ ಮೆಹಬೂಬ್, ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಭಾರತೀಯ ರೆಡ್ ಕ್ರಾಸ್ ಕಾರ್ಯದರ್ಶಿ ಶಬ್ಬೀರ್, ಮಹಿಳಾ ಪರ ಚಿಂತಕರಾದ ಗೀತಾ, ಜನನಿ ಒಔಂಢೇಶನ್ ಅಧ್ಯಕ್ಷೆ ಭಾನುಮತಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಪುಷ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.