ಬೆಂಗಳೂರಿನಲ್ಲಿ ವಕೀಲರೊಬ್ಬರ ಕೊಲೆ ಮತ್ತು ಇನ್ನೊಂದು ಪ್ರಕರಣದಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ವರದಿಯಾಗಿರುವುದು ವಕೀಲರ ಸಮೂಹವನ್ನು ಘಾಸಿಗೊಳಿಸಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವರ ಹಕ್ಕನ್ನು ರಕ್ಷಿಸುವ ಮತ್ತು ರಕ್ಷಣೆ ನೀಡುವ ಆಶಯ ಹೊಂದಿದೆ.
ಕನ್ನಡಪ್ರಭ ವಾರ್ತೆ, ಮಂಡ್ಯ
ರಾಜ್ಯದ ವಿವಿಧ ಭಾಗಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ, ಕೊಲೆ, ದಬ್ಬಾಳಿಕೆಗಳನ್ನು ಖಂಡಿಸಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ವಕೀಲರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಮಾವಣೆಗೊಂಡ ವಕೀಲರು ಜಿಲ್ಲಾಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಕಾರಿ ಬಿ.ಆರ್. ರೂಪ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ವಕೀಲರೊಬ್ಬರ ಕೊಲೆ ಮತ್ತು ಇನ್ನೊಂದು ಪ್ರಕರಣದಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ವರದಿಯಾಗಿರುವುದು ವಕೀಲರ ಸಮೂಹವನ್ನು ಘಾಸಿಗೊಳಿಸಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವರ ಹಕ್ಕನ್ನು ರಕ್ಷಿಸುವ ಮತ್ತು ರಕ್ಷಣೆ ನೀಡುವ ಆಶಯ ಹೊಂದಿದೆ. ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಕೀಲರಿಗೆ ರಕ್ಷಣೆ ಕೇಳುವ ದುರ್ಗತಿ ಬಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಸಮಾಜದಲ್ಲಿ ಮೌಲ್ಯಾಧಾರಿತ ವ್ಯಕ್ತಿತ್ವ ಮರೆಯಾಗಿ ಹಣ ಮತ್ತು ತೋಳ್ಬಲದ ಪರಾಕ್ರಮಗಳು ವಿಜೃಂಭಿಸುತ್ತಿವೆ. ನ್ಯಾಯ ದೊರಕಿಸುವ ವಕೀಲರಿಗೆ ಅತ್ಯಂತ ಮುಜುಗರ, ಜೀವಕ್ಕೆ ಅಪಾಯವಾಗುವ ಪ್ರಕರಣಗಳು ವರದಿಯಾಗುತ್ತಿರುವುದು ಸ್ವಾಸ್ತ್ಯ ಮತ್ತು ಸಮ ಸಮಾಜದ ಅವಲಕ್ಷಣವಾಗಿದೆ. ನಮ್ಮ ರಕ್ಷಣೆಗೆ ನಾವೇ ಪ್ರತಿಭಟಿಸುವ ಅನಿವಾರ್ಯ ಘಳಿಗೆ ಬಂದಿರುವುದು ಅತ್ಯಂತ ದುರಂತ ಎಂದು ಆರೋಪಿಸಿದರು.
ವಕೀಲರ ರಕ್ಷಣೆ ಸರ್ಕಾರಗಳ ಮೊದಲ ಆದ್ಯತೆಯಾಗಬೇಕಿದೆ. ನ್ಯಾಯದಾನ ವ್ಯವಸ್ಥೆಯ ಪ್ರಬಲ ಕೊಂಡಿಯಾಗಿರುವ ವಕೀಲರಿಗೆ ಸೂಕ್ತ ರಕ್ಷಣೆ ಒದಗಿಸುವುದು ಕರ್ತವ್ಯವಾಗಬೇಕು. ತುರ್ತಾಗಿ ಈ ಬಗ್ಗೆ ಗಮನ ಹರಿಸಿ ವಕೀಲರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣ ತಡೆಗಟ್ಟಲು ಕ್ರಮ ವಹಿಸುವಂತೆ ಒತ್ತಾಯಿಸಿದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್. ಸತ್ಯಾನಂದ, ಉಪಾಧ್ಯಕ್ಷ ದೇವರಾಜು, ಪ್ರಧಾನ ಕಾರ್ಯದರ್ಶಿ ಸತೀಶ್, ಖಜಾಂಚಿ ಚಂದ್ರಕಲಾ, ಸದಸ್ಯರಾದ ಶಂಕರ, ಯೋಗಾನಂದ, ಸಿದ್ದರಾಜು, ಚಂದ್ರಶೇಖರ್, ಗೀತಾ, ಜಿ.ಪಿ.ಎಸ್. ಶೋಭಾ, ಜಯಂತ್ಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.