ಸಾರಾಂಶ
ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪಿಸುವಂತೆ ಆಗ್ರಹಿಸಿ ಹುಣಸಗಿ ಕರವೇ ತಾಲೂಕು ಘಟಕದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹುಣಸಗಿ
ಕಲ್ಯಾಣ ಕರ್ನಾಟಕ ಭಾಗದ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆಗೆ ಕೇಂದ್ರ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕರವೇ ಹುಣಸಗಿ ತಾಲೂಕು ಘಟಕದ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಕರವೇ ತಾಲೂಕಾಧ್ಯಕ್ಷ ಬಸವರಾಜ ಚನ್ನೂರು ಮಾತನಾಡಿ, ರಾಯಚೂರು ನಗರವು ರೈಲ್ವೆ ಸಂಪರ್ಕ ಹಾಗೂ ಸಾರಿಗೆಯೊಂದಿಗೆ ಎಲ್ಲಾ ರೀತಿಯ ಸೌಕರ್ಯ ಹೊಂದಿದೆ. ಇಲ್ಲಿ ಐಐಟಿ ಸ್ಥಾಪಿಸಿದರೆ, ಬಹಳ ಅನುಕೂಲವಾಗುತ್ತಿತ್ತು. ಅದು ಆಗಲಿಲ್ಲ. ಅಲ್ಲದೆ ಡಾ.ನಂಜುಂಡಪ್ಪ ಶಿಫಾರಸ್ಸು ವರದಿ ಹೇಳಿದ್ದರೂ ಅದನ್ನು ಧಾರವಾಡಕ್ಕೆ ಸ್ಥಾಪಿಸಿತು. ರಾಯಚೂರಿಗೆ ಐಐಟಿ ಕೈತಪ್ಪಿದೆ, ಬದಲಾಗಿ ಏಮ್ಸ್ ಸ್ಥಾಪಿಸಿದರೆ ಈ ಭಾಗದ ಜನರಿಗೆ ಉಪಯುಕ್ತವಾಗಲಿದೆ ಎಂದು ಆಗ್ರಹಿಸಿದರು.
ಕಲ್ಯಾಣ ಭಾಗದ ಜನ ಆರೋಗ್ಯ ಸೌಕರ್ಯದ ಕೊರತೆ ಎದುರಿಸುತ್ತಿದ್ದು, ವೈದ್ಯಕೀಯ ಚಿಕಿತ್ಸಗೆ ದೊಡ್ಡ ನಗರಗಳ ಅವಲಂಬಿಸಿದ್ದಾರೆ. ಇದು ಅಲ್ಲದೆ ರಾಯಚೂರಿಗೆ ಏಮ್ಸ್ ಸ್ಥಾಪಿಸಿದರೆ, ರಾಜ್ಯ ಸರಕಾರವು ಸಕಲ ಸೌಕರ್ಯ ಕಲ್ಪಿಸಲು ಸಿದ್ಧವಿದೆ ಎಂದು ಸಿ.ಎಂ. ಸಿದ್ದರಾಮಯ್ಯನವರು ಕೇಂದ್ರ ಸರಕಾರಕ್ಕೆ ಮನವಿ ಕೂಡ ಮಾಡಿದ್ದಾರೆ. ಹೀಗಾಗಿ ಕೇಂದ್ರವು ಹಿಂದುಳಿದ ಪ್ರದೇಶ ಅಭಿವೃದ್ಧಿ ದೃಷ್ಟಿಯಿಂದ ಏಮ್ಸ್ ಸ್ಥಾಪನೆಗೆ ವಿಳಂಬ ನೀತಿ ಮಾಡುತ್ತಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಸಲ್ಲಿಸಲಾಯಿತು.
ಈ ವೇಳೆ ಕರವೇ ನಿಕಟಪೂರ್ವ ತಾಲೂಕಾಧ್ಯಕ್ಷ ಶಿವಲಿಂಗ ಸಾಹುಕಾರ, ಮೌನೇಶ ಸಾಹುಕಾರ, ಶರಣು ಅಂಗಡಿ, ಚಿಂಚೋಳಿ, ಸಿದ್ದನಗೌಡ ಯಕ್ತಾಪುರ, ರಾಜುಗೌಡ ಕುಪ್ಪಿ, ಬಂದೇನವಾಜ ಯಾತನೂರ, ಶಿವನಗೌಡ ಪಾಟೀಲ್, ಮಲ್ಲಿಕಾರ್ಜುನ ಮಾಳಿ, ರಾಜು ಅವರಾದಿ, ನಿಂಗಣ್ಣ ಗುತ್ತೇದಾರ ಸೇರಿದಂತೆ ಇತರರಿದ್ದರು.