ಸಾರಾಂಶ
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯನ್ನು ರಾಯಚೂರಿನಲ್ಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ಮಲ್ಲು ದಂಡು ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯನ್ನು ರಾಯಚೂರಿನಲ್ಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟಿಸಿ ಗ್ರೇಡ್-2 ತಹಸೀಲ್ದಾರ್ ಮಲ್ಲು ದಂಡು ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಮುಖಂಡರು, ಏಮ್ಸ್ ರಾಯಚೂರಿನಲ್ಲಿಯೇ ಸ್ಥಾಪಿಸುವಂತೆ ಒತ್ತಾಯಿಸಿ ನಿರಂತರವಾಗಿ ಧರಣಿಗಳನ್ನು ಕರವೇ ಮಾಡುತ್ತಾ ಬಂದಿದೆ. ಏಮ್ಸ್ ಆರಂಭಕ್ಕೆ ಕೇಂದ್ರ ಸರಕಾರ ಮಾಡುತ್ತಿರುವ ವಿಳಂಬ, ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಮಾಡುತ್ತಿರುವ ಅನ್ಯಾಯ. ಕರವೇ ಹೋರಾಟಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕೇಂದ್ರ ಸರಕಾರದ ಹಣಕಾಸು ಸಚಿವರಿಗೆ ಶಿಫಾರಸು ಪತ್ರವನ್ನು ಬರೆದು ರಾಯಚೂರಿನಲ್ಲಿ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕು ಎಂದು ಮನವಿ ಮಾಡಿದ್ದಾರೆ ಎಂದರು. ಇತ್ತೀಚೆಗೆ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳನ್ನು ದೆಹಲಿಯಲ್ಲಿ ಸ್ವತಃ ಭೇಟಿ ಮಾಡಿ ಹಿಂದುಳಿದ ಜಿಲ್ಲೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ ಕೇಂದ್ರ ಸರಕಾರದಿಂದ ಯಾವುದೇ ಸ್ಪಂದನೆ ಇರದೇ ಇರುವುದು ಖಂಡನೀಯ. ಐಐಟಿ ಯಿಂದ ವಂಚಿತಗೊಂಡ ರಾಯಚೂರಿಗೆ, 371(ಜೆ), ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನಕೊಟ್ಟು ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇವೆ ಎಂದರು. ಸಂಘಟನೆಯ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಭೈರಿಮರಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ಪದಾಧಿಕಾರಿಗಳಾದ ಹಣಮಗೌಡ ಶಖಾಪೂರ, ಆನಂದ ಮಾಚಗುಂಡಾಳ, ಶ್ರೀನಿವಾಸ ಲಕ್ಷ್ಮೀಪುರ, ಸೋಮಯ್ಯ ಹಾಲಗೇರಿ, ನಗರಘಟಕದ ಮಲ್ಲು ವಿಷ್ಣುಸೇನಾ, ನಿಂಗಣ್ಣ ಮಾಲಗತ್ತಿ, ದೇವು ರತ್ತಾಳ, ಯುವಘಟಕದ ನಾಗರಾಜ ಡೊಣ್ಣಿಗೇರಿ, ಆಟೋಘಟಕದ ಆನಂದ ರತ್ತಾಳ, ಮಲ್ಲಣ್ಣ ಹಸನಾಪೂರ, ಗ್ರಾಮಶಾಖೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳಾದ ಮಲ್ಲು ಯಾದವ, ಶೇಖರ ಚೌಡೇಶ್ವರಿಹಾಳ, ಅರ್ಜುನ ಯಕ್ಷಿಂತಿ, ಬಲಭೀಮ ಬೊಮ್ಮನಹಳ್ಳಿ ಸೇರಿದಂತೆ ಇತರರಿದ್ದರು.