ಮೂರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಪಿಎಂಸಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುತ್ತಲಿನ ೨೫ಕ್ಕೂ ಹೆಚ್ಚು ಹಳ್ಳಿಗಳಿಗೆ ತಂಬ್ರಹಳ್ಳಿ ಕೇಂದ್ರ ಸ್ಥಾನವಾಗಿದೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಬಹುದೊಡ್ಡ ಕಂದಾಯ ಹೋಬಳಿ ಕೇಂದ್ರವಾಗಿರುವ ತಂಬ್ರಹಳ್ಳಿ ಗ್ರಾಮದಲ್ಲಿ ಪದವಿ ಕಾಲೇಜು ಸ್ಥಾಪನೆಗಾಗಿ ಒತ್ತಾಯಿಸಿ ಗ್ರಾಮದ ಅಕ್ಕಿ ಬಸಮ್ಮ ತೋಟಪ್ಪ ಪದವಿ ಪೂರ್ವ ಕಾಲೇಜು ಸೇರಿದಂತೆ ಸುತ್ತಲಿನ ಗ್ರಾಮದ ಸಾವಿರಾರು ವಿದ್ಯಾರ್ಥಿಗಳು ಬುಧವಾರ ೫ನೇಯ ಬಾರಿಗೆ ಪತ್ರ ಚಳುವಳಿ ನಡೆಸಿದರು.
ಪತ್ರ ಚಳವಳಿ ಅಭಿಯಾನದ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ, ಕಳೆದ ಎರಡು ದಶಕದಿಂದ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಸಹಿತ ನಾಡಕಚೇರಿ, ಮೂರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಎಪಿಎಂಸಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಸುತ್ತಲಿನ ೨೫ಕ್ಕೂ ಹೆಚ್ಚು ಹಳ್ಳಿಗಳಿಗೆ ತಂಬ್ರಹಳ್ಳಿ ಕೇಂದ್ರ ಸ್ಥಾನವಾಗಿದೆ ಎಂದರು.ತಂಬ್ರಹಳ್ಳಿ ಸುತ್ತಲಿನ ೧೫ ಕಿಮೀ ವ್ಯಾಪ್ತಿಯ ಬಾಚಿಗೊಂಡನಹಳ್ಳಿ, ಮೋರಗೇರಿ, ಹಂಪಸಾಗರ ಗ್ರಾಮಗಳ ಪದವಿ ಪೂರ್ವ ಕಾಲೇಜುಗಳಲ್ಲಿ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ನಡೆಸುತ್ತಿದ್ದು, ಪದವಿ ಕಾಲೇಜು ಇಲ್ಲದ ಕಾರಣಕ್ಕೆ ಸಾವಿರಾರು ವಿದ್ಯಾರ್ಥಿನಿಯರು ಪದವಿ ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ ಎಂದು ದೂರಿದರು.
ಕಳೆದ ೮ ವರ್ಷದಿಂದ ಪದವಿ ಕಾಲೇಜು ಮಂಜೂರಾತಿಗಾಗಿ ಆಗ್ರಹಿಸಿ ಅನೇಕ ಬಾರಿ ಪತ್ರ ಚಳುವಳಿ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಪಾದಯಾತ್ರೆ ಮೂಲಕ ಹೋರಾಟ ನಡೆಸಿ ಸರಕಾರದ ಗಮನ ಸೆಳೆದಿದ್ದರೂ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಪದವಿ ಕಾಲೇಜಿಗಾಗಿ ಗ್ರಾಮದಲ್ಲಿ ೩ ಎಕರೆ ನಿವೇಶನ ಕಾಯ್ದಿರಿಸಲಾಗಿದ್ದರೂ ಶಿಕ್ಷಣ ಇಲಾಖೆ ಪದವಿ ಕಾಲೇಜಿನ ಮಂಜೂರಾತಿಗೆ ಮೀನ ಮೇಷ ಎಣಿಸುತ್ತಿದೆ. ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಉನ್ನತ ಶಿಕ್ಷಣ ಗಗನ ಕುಸುಮವಾಗದಿರಲು ಕೂಡಲೇ ೨೦೨೬-೨೭ ನೇ ಸಾಲಿನಲ್ಲಿ ಗ್ರಾಮದಲ್ಲಿ ಪದವಿ ಕಾಲೇಜು ಸ್ಥಾಪನೆಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಇಲಾಖೆಯ ಗಮನ ಸೆಳೆಯಲು ನಡೆಸಿರುವ ಪತ್ರ ಚಳುವಳಿ ಅಭಿಯಾನದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಅಕ್ಕಿ ಶಿವಕುಮಾರ್, ಸಹಕಾರ ಸಂಘದ ಅಧ್ಯಕ್ಷ ಮಾಬುಸಾಬ್, ಗೌರಜ್ಜನವರ ಬಸವರಾಜ, ನಿವೃತ್ತ ತಾ.ಪಂ.ಇಓ ಟಿ.ವೆಂಕೋಬಪ್ಪ, ಹ್ಯಾಟಿ ಆನಂದರೆಡ್ಡಿ, ಮರಿಯಮ್ಮನಹಳ್ಳಿ ಶಂಕರ್, ಪಟ್ಟಣಶೆಟ್ಟಿ ಸುರೇಶ್, ಕೆ.ಎಚ್.ಎಂ.ಕೊಟ್ರಯ್ಯ, ಎಚ್.ಬಿ.ಬಸವಗೌಡ, ಕಡ್ಡಿ ಚನ್ನಬಸಪ್ಪ, ಗ್ಯಾರಂಟಿ ಯೋeನಾ ಸದಸ್ಯ ಜಿ.ಗಿರೀಶ್, ರೆಡ್ಡಿ ಬಸವಲಿಂಗನಗೌಡ, ಮೈನಳ್ಳಿ ಸುರೇಶ್, ರಮೇಶ್ ಪೂಜಾರ್ ಮತ್ತಿತರರು ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.