ಮೀನು ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ

| Published : Feb 02 2025, 01:01 AM IST

ಸಾರಾಂಶ

ಉಡುಪಿ ಜಿಲ್ಲಾ ಮಿನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಸಮಾವೇಶ ಬನ್ನಂಜೆ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು. ಸಮಾವೇಶವನ್ನು ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಜಿಲ್ಲಾ ಮಿನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಸಮಾವೇಶ ಬನ್ನಂಜೆ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು. ಸಮಾವೇಶವನ್ನು ಸಿಐಟಿಯು ಜಿಲ್ಲಾ ಕೋಶಾಧಿಕಾರಿ ಶಶಿಧರ ಗೊಲ್ಲ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ದುಡಿಯುವ ವರ್ಗದ ಕಾರ್ಮಿಕರಿಗೆ ಸರ್ಕಾರದ ಕೆಲವು ಕಾನೂನು ತಿದ್ದುಪಡಿಯಿಂದಾಗಿ ಸರಿಯಾದ ವೇತನ, ಕೆಲಸ ಸಿಗುತ್ತಿಲ್ಲ. ಮೀನುಗಾರಿಕೆಯಲ್ಲಿ ದುಡಿಯುವ ಕಾರ್ಮಿಕರು ಇಂದು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ ಎಂದರು.ಸಭೆಯ ಅಧ್ಯಕ್ಷತೆಯನ್ನು ಕೆ.ಶಂಕರ್ ವಹಿಸಿದ್ದರು. ಬೀಡಿ ಆ್ಯಂಡ್ ಟೊಬ್ಯಾಕೋ ಲೆಬರ್ ಯೂನಿಯನ್ ಉಡುಪಿ ಇದರ ಕಾರ್ಯದರ್ಶಿ ಉಮೇಶ್ ಕುಂದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಮೀನುಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಮುಖಂಡರಾದ ಅನ್ವರ್ ಕಟಪಾಡಿ, ಇಸ್ಮಾಯಿಲ್ ಕಾಪು, ಇಕ್ಬಾಲ್ ಉಡುಪಿ ಉಪಸ್ಥಿತರಿದ್ದರು.ಆಗ್ರಹ ನಿರ್ಣಯಗಳು:ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ ಮತ್ತು ಮೀನುಗಾರಿಕೆಯಲ್ಲಿ ಕೆಲಸ ಮಾಡುವ ಎಲ್ಲ ವಿಭಾಗದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಗಾಗಿ ಕಲ್ಯಾಣ ಮಂಡಳಿಯೊಂದನ್ನು ರಾಜ್ಯದಲ್ಲಿ ರಚಿಸಬೇಕು, ತನ್ಮೂಲಕ ಅಪಘಾತ ಸಂಭವಿಸಿದಲ್ಲಿ ಪರಿಹಾರ, ವಸತಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಹೆಣ್ಣು ಮಕ್ಕಳಿಗೆ ಮದುವೆ ಸಹಾಯಧನ ಸವಲತ್ತುಗಳನ್ನು ನೀಡಬೇಕು.

ಮೀನುಗಾರರಿಗೆ ಹಾಗೂ ಮೀನು ಕಾರ್ಮಿಕರಿಗೆ 60 ವರ್ಷ ಪ್ರಾಯದ ನಂತರ ತಿಂಗಳಿಗೆ 6000 ರು. ಪಿಂಚಣಿ ನೀಡಬೇಕು, ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ 20 ಲಕ್ಷ ರು. ಪರಿಹಾರ ನೀಡಬೇಕು, ಕೇಂದ್ರ ಸರ್ಕಾರ ಮೀನುಗಾರಿಕಾ ಉದ್ಯಮಕ್ಕಿರುವ ಆರ್ಥಿಕ ಪಾಲು ಹೆಚ್ಚಿಸಬೇಕು, ಮಳೆಗಾಲದಲ್ಲಿ 3 ತಿಂಗಳು ಮೀನುಗಾರರ ಕುಟುಂಬಕ್ಕೆ ಉಚಿತ ರೇಷನ್ ನೀಡಬೇಕು ಎಂಬಿತ್ಯಾದಿ 15 ಬೇಡಿಕೆಗಳ ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಯಿತು.