ಶ್ರೀವೈಷ್ಣವ ಸಮಾಜ ಸಮುದಾಯಭವನದಲ್ಲಿ ಸೋಮವಾರ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣಾ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ

ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದಲ್ಲಿ ಕಡಿಮೆ ಜನಸಂಖ್ಯೆಯಲ್ಲಿರುವ, ಆರ್ಥಿಕವಾಗಿ ಹಿಂದುಳಿದಿರುವ ಶ್ರೀವೈಷ್ಣವ ಸಮಾಜಕ್ಕೆ ಶಕ್ತಿ ತುಂಬಲು ರಾಜ್ಯ ಸರ್ಕಾರ ಶ್ರೀವೈಷ್ಣವ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ನಿಗಮಕ್ಕೆ ಕನಿಷ್ಠ ನೂರು ಕೋಟಿ ರು. ಅನುದಾನ ನೀಡಬೇಕು. ದೇಶಾದ್ಯಂತ ವಿಶಿಷ್ಟಾದ್ವೈತ ತತ್ವ ಸಾರಿದ ರಾಮಾನುಜಾಚಾರ್ಯರ ಜಯಂತಿಯನ್ನು ಸರ್ಕಾರದಿಂದ ಆಚರಿಸಬೇಕು ಎಂದು ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ಅಧ್ಯಕ್ಷ ಟಿ.ಎಸ್.ಮೋಹನ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.ನಗರದ ಮಾರುತಿನಗರದ ಶ್ರೀವೈಷ್ಣವ ಸಮಾಜ ಸಮುದಾಯಭವನದಲ್ಲಿ ಸೋಮವಾರ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣಾ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದರು.ಶ್ರೀವೈಷ್ಣವ ಸಮಾಜದವರು ಸಾರ್ವಜನಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆಯುವಷ್ಟು ರಾಜಕೀಯ ಶಕ್ತಿ ಹೊಂದಿಲ್ಲ. ಈ ಪರಿಸ್ಥಿತಿಯಲ್ಲಿ ಸರ್ಕಾರದ ವಿವಿಧ ಸ್ಥಾನಮಾನಗಳಿಗೆ ಸಮಾಜದ ಮುಖಂಡರನ್ನು ನೇಮಕ ಮಾಡಿ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದರು.ದೇವರ ಆರಾಧನೆ ಮಾಡುವ ಅರ್ಚಕ ವೃತ್ತಿ ಮಾಡಿಕೊಂಡುಬರುತ್ತಿರುವ ಶ್ರೀವೈಷ್ಣವ ಸಮಾಜದವರು ಆರ್ಥಿಕವಾಗಿ ಹಿಂದೆ ಇದ್ದಾರೆ. ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿಲ್ಲ. ಸಮಾಜದವರನ್ನು ಮುಖ್ಯವಾಹಿನಿಗೆ ತರಲು ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯ ಸಮಾಜದವರನ್ನು ಒಟ್ಟುಗೂಡಿಸಲು ತಾಲ್ಲೂಕು, ಹೋಬಳಿ, ವಾರ್ಡ್ ಮಟ್ಟದ ಸಮಿತಿಗಳ ರಚನೆ ಮಾಡಲಾಗುತ್ತಿದೆ. ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಅಧ್ಯಕ್ಷ ಟಿ.ಎಸ್.ಮೋಹನ್‌ಕುಮಾರ್ ಹೇಳಿದರು.ಎಲ್ಲಾ ಜಾತಿ, ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ಸರ್ಕಾರ ಶ್ರೀವೈಷ್ಣವ ಸಮಾಜದ ನಿಗಮ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ, ಈ ಬಗ್ಗೆ ಸಂಬಂಧಿಸಿದ ಶಾಸಕರು, ಸಚಿವರ ಗಮನ ಸೆಳೆಯಲಾಗುವುದು. ಹಾಗೇ ಸರ್ಕಾರದಿಂದ ರಾಮಾನುಜಾಚಾರ್ಯರ ಜಯಂತಿ ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.ನಮ್ಮ ಸಮಾಜದ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಲು ಸಂಸ್ಕೃತಿ, ಯೋಗ ಕಾರ್ಯಕ್ರಮ ಆಯೋಜನೆ, ಸಮುದಾಯಭವನ ಆವರಣದಲ್ಲಿ ದೇವಸ್ಥಾನ ನಿರ್ಮಾಣ ಮಾಡಿ ವಿಶ್ವಸೇನಾ ಮೂರ್ತಿ ಸ್ಥಾಪನೆ ನಮ್ಮ ಪೂಜಾ, ಸಂಸ್ಕಾರ ಕೈಂಕರ್ಯಗಳನ್ನು ಮುಂದುವರೆಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ಈ ವೇಳೆ ಸಮಾಜದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯ ಉಪಾಧ್ಯಕ್ಷ ನವರತ್ನಕುಮಾರ್, ಕಾರ್ಯದರ್ಶಿ ಯೋಗಾನಂದ್, ಸಂಘಟನಾ ಕಾರ್ಯದರ್ಶಿ ಕೆ.ಎಸ್.ರವಿಕುಮಾರ್, ಖಜಾಂಚಿ ಡಿ.ಎಸ್.ಭಕ್ತವತ್ಸಲ, ನಿರ್ದೇಶಕರಾದ ಎಚ್.ಎನ್.ಕುಮಾರ್, ಎನ್.ರವಿಕುಮಾರ್, ನಳಿನಾ ಶ್ರೀವತ್ಸ, ಸೀನಪ್ಪ, ಕೆ.ವೆಂಕಟೇಶ್, ಸತ್ಯನಾರಾಯಣ, ಜನಾರ್ಧನ, ಜಿ.ಕೇಶವಮೂರ್ತಿ, ಎಚ್.ಕೆ.ಪುಟ್ಟರಾಜು ಮೊದಲಾದವರು ಭಾಗವಹಿಸಿದ್ದರು.