ಟಿ.ಹೊಸಹಳ್ಳಿಯಲ್ಲಿ ಅಕ್ರಮ ಮನೆಗಳ ತೆರವಿಗೆ ಆಗ್ರಹ

| Published : Feb 15 2025, 12:32 AM IST

ಟಿ.ಹೊಸಹಳ್ಳಿಯಲ್ಲಿ ಅಕ್ರಮ ಮನೆಗಳ ತೆರವಿಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹಾರೋಹಳ್ಳಿ ತಾಲೂಕು ಟಿ.ಹೊಸಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಿದ್ದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಟಿ.ಹೊಸಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರಾಮನಗರ: ಹಾರೋಹಳ್ಳಿ ತಾಲೂಕು ಟಿ.ಹೊಸಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಿದ್ದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಟಿ.ಹೊಸಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಪ್ರತಿಭಟನಾ ಸ್ಥಳದಲ್ಲಿ ಧರಣಿ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳನ್ನೇ ವಂಚಿಸಿ ನಕಲಿ ಹಕ್ಕುಪತ್ರ ಮತ್ತು ಇತರೆ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರಿ ಜಾಗ ಕಬಳಿಸಲಾಗಿದೆ ಎಂದು ದೂರಿದರು.

ಗ್ರಾಮದ ಸರ್ವೆ ನಂ.12ರ ಸರ್ಕಾರಿ ಜಮೀನಿನ ನಕಲಿ ಹಕ್ಕು ಪತ್ರ ಮತ್ತು ಇತರೆ ದಾಖಲೆಗಳನ್ನು ವೆಂಕಟೇಶ್ ಎಂಬುವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ಖಾಲಿ ಜಾಗವನ್ನು ಕಬಳಿಸುವ ಉದ್ದೇಶದಿಂದ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಸಂಬಂಧ ಹಕ್ಕು ಪತ್ರ ನೀಡುವಂತೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿದಾಗ ನಮೂದಾಗಿರುವ ದಾಖಲೆಗಳನ್ನು ಲಭ್ಯವಿಲ್ಲವೆಂದು ಹಿಂಬರಹ ನೀಡಿದ್ದಾರೆ.

ಅಲ್ಲದೆ, ವೆಂಕಟೇಶ್ ತಂದೆ ಚಿಕ್ಕಮರಿಯಪ್ಪ ಹೆಸರಿಗೆ ನೀಡಿರುವ ಹಕ್ಕು ಪತ್ರದ ಸ್ವತ್ತಿನ ಸಂಖ್ಯೆ 24 ಎಂದು ನೀಡಲಾಗಿದೆ. ಅವರಿಗೂ ಹಕ್ಕು ಪತ್ರ ನೀಡಿಲ್ಲ ಎಂಬುದು ಖಾತ್ರಿಯಾಗಿದೆ. ಸೈಟ್ ನಂ.1ರಿಂದ 23ರವರೆಗೆ ಯಾರಿಗೂ ಹಕ್ಕು ಪತ್ರ ನೀಡಿಲ್ಲ. ಆದರೂ ಹಕ್ಕ ಪತ್ರ ಮತ್ತು ಸಂಬಂಧಿಸಿದ ಸರ್ಕಾರಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಿ.ವೆಂಕಟೇಶ್ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಯ ಅಕ್ಕಪಕ್ಕದಲ್ಲಿ 6ರಿಂದ 7 ಜನರು ಸ್ವತ್ತಿನಲ್ಲಿ ಅಕ್ರಮವಾಗಿ ಸ್ವಾಧೀನದಲ್ಲಿದ್ದಾರೆ. ಈ ಅಕ್ರಮ ಸ್ವಾಧೀನದ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಗ್ರಾಪಂ ಸಭೆಯ ನಡವಳಿಯಲ್ಲಿ ಸರ್ವೆ ನಂ.12ರಲ್ಲಿ ಅಂಬೇಡ್ಕರ್ ಭವನ , ಆಟದ ಮೈದಾನ ಮತ್ತು ನಿವೇಶನಕ್ಕೆ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿ ಸರ್ವಾನುಮತದಿಂದ ನಡವಳಿ ಮಾಡಲಾಗಿದೆ.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅದು ಯೋಗ್ಯವಾದ ಸ್ಥಳವಾಗಿದ್ದು, ಸದರಿ ಸ್ವತ್ತಿನಲ್ಲಿ ಅಕ್ರಮವಾಗಿ ಅನುಭವದಲ್ಲಿರುವ 6 ರಿಂದ 7 ಮಂದಿಯನ್ನು ಆ ಜಾಗದಿಂದ ತೆರವುಗೊಳಿಸಬೇಕು. ಸಾರ್ವಜನಿಕವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸದರಿ ಸ್ವತ್ತನ್ನು ಮಂಜೂರು ಮಾಡಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಎನ್.ಶ್ರೀಕಂಠ, ಪ್ರದೀಪ, ಕಿರಣ್ ಕುಮಾರ್, ವಿಜಿ ಕುಮಾರ್, ಮುತ್ತುರಾಜ್, ಮಂಜುನಾಥ್, ಮಹಾಲಿಂಗಯ್ಯ, ಆರ್.ಶ್ರೀನಿವಾಸ, ಕೃಷ್ಣ, ನಾಗರಾಜು, ಗಂಗಮಲ್ಲಮ್ಮ, ಜಯಮ್ಮ, ಚಂದ್ರಮ್ಮ, ಚಿಕ್ಕತಾಯಮ್ಮ ಮತ್ತಿತರರು ಭಾಗವಹಿಸಿದ್ದರು.

14ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯ ಪ್ರತಿಭಟನಾ ಸ್ಥಳದಲ್ಲಿ ಟಿ.ಹೊಸಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.